ಹರ್ಯಾಣ ಕೋಮು ಹಿಂಸಾಚಾರಕ್ಕೆ ಅಲ್ಲಿನ ಸರಕಾರವೇ ನೇರ ಹೊಣೆ
Update: 2023-08-02 17:14 GMT
ಆರ್. ಜೀವಿ
ಒಬ್ಬ ಕೋಮುವಾದಿ ಗೂಂಡಾ. ಬಜರಂಗದಳದ ರಾಜ್ಯ ನಾಯಕ ಹಾಗು ನಕಲಿ ಗೋ ರಕ್ಷಕ ಪಡೆಯ ಮುಖ್ಯಸ್ಥ. ಆತನಿಗೆ ಆ ರಾಜ್ಯದಲ್ಲಿ ರಾಜ ಮರ್ಯಾದೆ. ಪೊಲೀಸರೂ ಆತ ಬಂದರೆ ಎದ್ದು ನಿಲ್ಲುತ್ತಾರೆ. ಆತನ ಜೊತೆ ಫೋಟೋಗೆ ಪೋಸ್ ಕೊಡುತ್ತಾರೆ. ಆತನಿಗೆ ನಾಗರಿಕ ಪೊಲೀಸ್ ಎಂದು ಪೊಲೀಸ್ ರೀತಿಯ ಸಮವಸ್ತ್ರವೂ ಸಿಗುತ್ತದೆ. ಆತನ ಸೂಚನೆ ಪ್ರಕಾರವೇ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಾರೆ, ಕ್ರಮ ಕೈಗೊಳ್ಳುತ್ತಾರೆ.
ಆತ ರೈಫಲ್ ಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕ್ತಾನೆ.
ಆತನ ಹೆಸರು ಮೋನು ಮನೇಸರ್. ಆತ ಜುನೈದ್ ಹಾಗು ನಾಸಿರ್ ಎಂಬ ಇಬ್ಬರನ್ನು ಅಪಹರಿಸಿ ಅವರನ್ನು ಜೀವಂತ ಸುಟ್ಟು ಹಾಕುತ್ತಾನೆ. ಆದರೆ ಆತನ ಬಂಧನ ಆಗೋದಿಲ್ಲ. ಆತನನ್ನು ಬಂಧಿಸಲು ಬಂದರೆ ಪೊಲೀಸರೇ ಜೀವಂತ ಉಳಿಯೋದಿಲ್ಲ ಎಂದು ಜನರು ಆತನನ್ನು ಬೆಂಬಲಿಸಿ ಮೆರವಣಿಗೆ ನಡೆಸ್ತಾರೆ. ಮಹಾಪಂಚಾಯತ್ ನಡೆಸ್ತಾರೆ. ಆತನನ್ನು ಕೇಳಿಕೊಂಡು ಬಂದ ಪಕ್ಕದ ರಾಜ್ಯದ ಪೊಲೀಸರನ್ನು ಓಡಿಸಲಾಗುತ್ತದೆ. ಅವರ ಮೇಲೆಯೇ ಕೇಸು ಜಡಿಯಲಾಗುತ್ತದೆ. ಆಮೇಲೆ ಆತ ನಾಪತ್ತೆಯಾಗಿದ್ದಾನೆ ಎಂದು ರಾಜ್ಯ ಸರಕಾರ ಹಾಗು ಪೊಲೀಸರು ಹೇಳುತ್ತಾರೆ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ಆತನದ್ದೇ ದರ್ಬಾರು. ಬೇಕೆಂದಾಗ ಬಂದು ಬೇಕಾದ್ದನ್ನು ಹೇಳಿ ಹೋಗ್ತಾನೆ.
ಮೊನ್ನೆ ರವಿವಾರವೂ ಆತ ಇನ್ಸ್ಟಾಗ್ರಾಮ್ ನಲ್ಲಿ ಬಂದು ಹರ್ಯಾಣದ ಮುಸ್ಲಿಂ ಬಾಹುಳ್ಯದ ನೂಹ್ ಎಂಬಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್ ನ ಮೆರವಣಿಗೆಯಲ್ಲಿ ನಾನೂ ಭಾಗವಹಿಸುತ್ತೇನೆ. ನೀವೆಲ್ಲರೂ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಬನ್ನಿ ಎಂದು ಹೇಳುತ್ತಾನೆ.
ಆದರೆ ಆಗಲೂ ಆತನನ್ನು ಪತ್ತೆ ಹಚ್ಚುವ, ಬಂಧಿಸುವ ಕೆಲಸ ಅಲ್ಲಿನ ಪೊಲೀಸರು ಮಾಡೋದಿಲ್ಲ. ಮೋನು ಮನೇಸರ್ ಹೇಳಿದ ಹಾಗೆ ವಿಹಿಂಪದ ಮೆರವಣಿಗೆಗೆ ಬರಲಿಲ್ಲ. ಆದರೆ ಆತನ ವೀಡಿಯೊ ಅದಾಗಲೇ ತನ್ನ ಕೆಲಸ ಮಾಡಿ ಆಗಿತ್ತು. ನೂಹ್ ನಲ್ಲಿ ಅದು ಕೋಮು ದ್ವೇಷ ಹರಡಿ ಇಡೀ ವಾತಾವರಣವನ್ನು ಉದ್ವಿಗ್ನಗೊಳಿಸಿ ಆಗಿತ್ತು. ಅಲ್ಲಿನ ಮುಸ್ಲಿಮರು ನೀನು ತಾಕತ್ತಿದ್ದರೆ ಬಾ ಇಲ್ಲಿಗೆ ಎಂದು ಆತನಿಗೆ ಪ್ರತಿ ಸವಾಲು ಹಾಕಿದರು.
ನೂಹ್ ನಲ್ಲಿ ಹಿಂಸಾಚಾರ ಭುಗಿಲೇಳಲು ಇಷ್ಟು ಸಾಕಾಯಿತು. ಹರ್ಯಾಣದ ನೂಹ್ ಪಟ್ಟಣದ ಮೆವಾತ್ ವಲಯದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆ ವೇಳೆ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆ ಈವರೆಗೆ ಐವರನ್ನು ಬಲಿ ತೆಗೆದುಕೊಂಡಿದೆ. ಇಬ್ಬರು ಹೋಂ ಗಾರ್ಡ್ಗಳು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ಧಾರೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅದೆಷ್ಟೋ ಆಮಾಯಕರ ಅಂಗಡಿ ಮುಂಗಟ್ಟುಗಳು ದುಷ್ಕರ್ಮಿಗಳು ಹಚ್ಚಿದ ಬೆಂಕಿಯಲ್ಲಿ ಬೂದಿಯಾಗಿ ಹೋಗಿವೆ. ಅದೆಷ್ಟೋ ಅಮಾಯಕರ ಬದುಕು ಕಂಗೆಟ್ಟುಹೋಗಿದೆ. ಗುರುಗ್ರಾಮದಲ್ಲಿ ಮಸೀದಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮಸೀದಿಯ ಸಹಾಯಕ ಇಮಾಮ್ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿಯೇ ಇದೆ.
ಇವಿಷ್ಟು ವಿವರ ಕೇಳಿದ ಮೇಲೆ ಈಗ ನೀವೇ ಹೇಳಿ. ಹರ್ಯಾಣದಲ್ಲಿ ನಿಜವಾಗಲೂ ಬಿಜೆಪಿ ಸರಕಾರ ಎಂಬುದು ಇದೆಯೇ ?
ಇದ್ದರೆ ನೂಹ್ ಹಾಗು ಗುರುಗ್ರಾಮದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಅದೇ ನೇರ ಕಾರಣ ಅಲ್ಲವೇ ?. ಇಬ್ಬರನ್ನು ಸಜೀವ ದಹನ ಮಾಡಿದ ಕೊಲೆ ಆರೋಪಿಯನ್ನು ಬಂಧಿಸದೆ ಸೋಷಿಯಲ್ ಮೀಡಿಯಾದಲ್ಲಿ ಆತ ಬೇಕಾಬಿಟ್ಟಿ ಹೇಳಿಕೆ ಕೊಡಲು ಬಿಡುವುದು ಕೋಮು ಹಿಂಸೆಗೆ ನೇರ ಪ್ರಚೋದನೆ ಅಲ್ಲವೇ ? ಅದನ್ನು ಹರ್ಯಾಣದಲ್ಲಿ ಅಲ್ಲಿನ ಬಿಜೆಪಿ ಸರಕಾರವೇ ಮಾಡಿಸಿಲ್ಲವೇ ?
ಈ ದೇಶದಲ್ಲಿ ಈಗ ದ್ವೇಷ ಮಾತ್ರವೇ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಜನರನ್ನು ನೆರೆಮನೆಯವರ ಮೇಲೆಯೇ ಎತ್ತಿಕಟ್ಟುವ, ಹೊಡೆದಾಟಕ್ಕೆ ಹಚ್ಚುವ, ಹತ್ಯೆ ಮಾಡಿಸುವ ಕ್ರೂರ ರಾಜಕಾರಣದ ಅಟ್ಟಹಾಸ ನಿಲ್ಲುತ್ತಿಲ್ಲ. ಮಣಿಪುರ ಕಳೆದ ಮೂರು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿಗೆ ಒಮ್ಮೆಯೂ ಭೇಟಿ ನೀಡದ ಪ್ರಧಾನಿ ಮೋದಿ ಅಲ್ಲಿ ಹಿಂಸಾಚಾರ ಪ್ರಾರಂಭವಾದ ಮೇಲೆ ಅಮೆರಿಕಕ್ಕೆ, ಫ್ರಾನ್ಸ್ ಗೆ, ಈಜಿಪ್ಟ್ ಗೆ, ಅಬುಧಾಬಿಗೆ ಹೋಗಿ ಬಂದರು. ಈಗ ಪುಣೆಗೆ ಪ್ರಶಸ್ತಿ ಸ್ವೀಕರಿಸಲು ಹೋಗಿದ್ದಾರೆ. ಈ ನಡುವೆ ಅಲ್ಲಿ ಆಡಳಿತದಲ್ಲಿರುವ ಬಿಜೆಪಿಯದ್ದೇ ಸರ್ಕಾರವಿರುವ ಹರ್ಯಾಣ ಈಗ ಕೋಮು ಸಂಘರ್ಷದಿಂದ ತತ್ತರಿಸುತ್ತಿದೆ.
ನೂಹ್ ಮತ್ತು ಗುರುಗ್ರಾಮ್ ಪ್ರದೇಶಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಇದ್ದರೂ ಜನರು ಹಿಂಸಾಚಾರದಲ್ಲಿ ತೊಡಗಿದ್ದ ವರದಿಗಳು ಬಂದಿವೆ. ಮಂಗಳವಾರ ಕೂಡ 200 ಮಂದಿಯಿದ್ದ ಶಸ್ತ್ರಸಜ್ಜಿತ ಗುಂಪು ಏಕಾಏಕಿ ದಾಳಿ ನಡೆಸಿದ್ದು, ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತ, ಅಂಗಡಿಗಳು, ರೆಸ್ಟೋರೆಂಟ್ಗಳಿಗೆ ಬೆಂಕಿ ಹಚ್ಚಿದೆ.
ದೆಹಲಿಯ ಗಡಿಭಾಗದವರೆಗೂ ಹಿಂಸಾಚಾರ ಹಬ್ಬುತ್ತಿರುವ ವರದಿಗಳು ಬಂದಿವೆ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಅಬ್ಬರಿಸಿದ್ದಾರೆ. ಆದರೆ, ಘಟನೆಗೆ ಕಾರಣರಾದವರು ಯಾರೆಂಬುದು ಬಿಜೆಪಿಯ ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೆ?. ಇಬ್ಬರನ್ನು ಸಜೀವ ದಹನ ಮಾಡಿರುವ ಆರೋಪ ಎದುರಿಸುವ ವ್ಯಕ್ತಿ ಐದು ತಿಂಗಳಾದರೂ ಬಂಧನ ಆಗಿಲ್ಲ ಏಕೆ ಎಂದು ಈ ದೇಶಕ್ಕೆ ಹರ್ಯಾಣ ಸಿಎಂ ಹೇಳ್ತಾರಾ ?
ಇದೆಲ್ಲದರ ನಡುವೆ, ಅದೇ ಆರೋಪಿ ವೀಡಿಯೊ ಹರಿಬಿಡುತ್ತಾನೆ, ತಾನೆಷ್ಟು ಪ್ರಭಾವಿ ಎಂಬಂತೆ ವಿಹಿಂಪ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಳ್ಳುತ್ತಾನೆ, ಇಡೀ ವಾತಾವರಣವನ್ನೇ ಕಲಕಿಬಿಡುತ್ತಾನೆ. ಆದರೆ ಪೊಲೀಸರಿಗೆ ಮಾತ್ರ ಅವನ ಸುಳಿವೇ ಸಿಗುವುದಿಲ್ಲ ಎಂದರೆ ಯಾರಾದರೂ ನಂಬಲು ಸಾಧ್ಯವೇ ?. ಇಂಥವರದ್ದೇ ಕಾರುಬಾರು ಹರ್ಯಾಣದ ತುಂಬಾ ಇದೆ ಎಂಬುದು ಈ ಹಿಂಸಾಚಾರದಿಂದ ಮತ್ತೆ ಸಾಬೀತಾಗಿದೆ. ಆಗಲೂ ಅವನ ಪರವಾಗಿ ಆಡಳಿತ ನಡೆಸುವ ಬಿಜೆಪಿಯ ಮಂದಿಯೇ ಮಾತನಾಡಿದ್ದರು. ಬಂಧಿಸಲು ಬಂದರೆ ಸುಟ್ಟುಬಿಡುತ್ತೇವೆ ಎಂದು ಪೊಲೀಸರಿಗೇ ಬೆದರಿಕೆಯೊಡ್ಡಿದ್ದರು.
ಇದೆಲ್ಲವೂ ನಡೆಯುವ ಹರ್ಯಾಣದಲ್ಲಿ, ಈಗ ಹಿಂಸಾಚಾರಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಖಟ್ಟರ್ ಅಬ್ಬರಿಸುತ್ತಿರುವುದು ಯಾರ ವಿರುದ್ಧ?. ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ಪ್ರಕಾರ, ಮೆವಾತ್ ವಲಯದಲ್ಲಿ ಕಳೆದ 10 ವರ್ಷಗಳಲ್ಲಿ ರಾಜಕೀಯ ಉದ್ವಿಗ್ನತೆ ಉಂಟುಮಾಡುವ ಪ್ರಯತ್ನಗಳು ಲೆಕ್ಕವಿಲ್ಲದಷ್ಟು ಸಲ ನಡೆದಿವೆ. ಈಗ ಕೂಡ ಇದನ್ನು ಯಾರು ಮಾಡಿದರು ಎಂಬುದು ಗೊತ್ತಿರದೇ ಇರುವ ವಿಷಯವಲ್ಲ.
ವಿವಿಧ ಮೆರವಣಿಗೆಗಳ ಹೆಸರಿನಲ್ಲಿ ಉದ್ವಿಗ್ನತೆ ಹುಟ್ಟುಹಾಕಲಾಗುತ್ತದೆ. ಹಿಂಸಾಚಾರ ನಡೆಯುತ್ತದೆ. ಶಾಲೆ ಕಾಲೇಜುಗಳು ಬಂದ್ ಆಗುತ್ತವೆ. ಕಡೆಗೆ ಈ ಬಿಜೆಪಿ ಸರ್ಕಾರ ಎಲ್ಲ ಕಡೆಯೂ ಮಾಡುವ ಹಾಗೆ ಇಂಟರ್ನೆಟ್ ಸ್ಥಗಿತಗೊಳಿಸಿ ಕುಳಿತುಬಿಡುತ್ತದೆ. ಯಾಕೆ ಇಂಥ ಮೆರವಣಿಗೆಗಳಲ್ಲಿ ಬಡವರ ಮನೆಯ ಮಕ್ಕಳೇ ಹಿಂಸಾಚಾರದ ಭಾಗವಾಗುತ್ತಾರೆ ? ಯಾಕೆ ಇವರ ಸೂತ್ರಕ್ಕೆ ತಕ್ಕಂತೆ ಪ್ರಚೋದನಕಾರಿ ಘೋಷಣೆ ಕೂಗಲು ಅವರೇ ಬೇಕಾಗುತ್ತಾರೆ? ಅವರೇ ಏಕೆ ಇವರು ಹುಟ್ಟುಹಾಕುವ ಗಲಭೆಯಲ್ಲಿ ಇರುತ್ತಾರೆ ?
ಆದರೆ ಇವರ ಹಿಂದೆ ನಿಂತು, ಇವರ ಬಾಯಲ್ಲಿ ಘೋಷಣೆ ಕೂಗಿಸಿ, ಇವರನ್ನು ಹಿಂಸಾಚಾರದ ಭಾಗವಾಗಿಸುವ ದೊಡ್ಡವರ ಮಕ್ಕಳೆಲ್ಲ ವಿದೇಶಕ್ಕೆ ಹೋಗುತ್ತಾರೆ. ಯುಪಿಯ ಬರೇಲಿಯಿಂದ ಹಿಡಿದು ಹರ್ಯಾಣದ ನೂಹ್ವರೆಗಿನ ಎಲ್ಲ ಹಿಂಸಾಚಾರದ ಘಟನೆಗಳ ಉದ್ದೇಶ ಒಂದೇ. ಏನೆಂದರೆ, ರಾಜಕಾರಣಿಯೊಬ್ಬನ ಧರ್ಮದ ಹೆಸರಿನ ರಾಜಕಾರಣಕ್ಕೆ ಬಡವರ ಮನೆಯ ಮಕ್ಕಳನ್ನು ಗಲಭೆಕೋರರನ್ನಾಗಿಸುವುದು, ಬಲಿಪಶುವಾಗಿಸುವುದು. ಆದರೆ ಆ ರಾಜಕಾರಣಿ ಮಾತ್ರ ದೊಡ್ಡ ಮನುಷ್ಯನಾಗಿ ಮೆರೆಯುತ್ತಾನೆ. ಆತನ ಮಕ್ಕಳು ವಿಲಾಸಿ ಜೀವನ ನಡೆಸುತ್ತಾರೆ.
ದೇಶದಲ್ಲಿ ಪೊಲೀಸರು ಮತ್ತು ಸೇನಾ ವ್ಯವಸ್ಥೆ ಇದೆ. ಆದರೆ ಬಜರಂಗದಳ ಅಸ್ಸಾಂ ನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡುತ್ತದೆ. ಮದ್ರಸಾಗಳು ಬೇಡ ಎಂದು ಹೇಳುವ ಅಸ್ಸಾಂ ಸಿಎಂ ಈ ಕಾನೂನು ಬಾಹಿರ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಡ್ತಾರೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಬ್ಬರಿಸುವ ಇವರ ಆಡಳಿತದಲ್ಲಿ ಆ ಸಂಘಟನೆಗೆ ಅದನ್ನು ಮಾಡಲು ಅನುಮತಿ ಕೊಟ್ಟವರು ಯಾರು?
ಇದನ್ನೇ ಬೇರೆ ಸಮುದಾಯದವರು ಮಾಡಿದ್ದಿದ್ದರೆ ಆಗಲು ಈ ಸರ್ಕಾರ ಸುಮ್ಮನಿರುತ್ತಿತ್ತೆ?
ಇಡೀ ಹಿಂಸಾಚಾರದ ಹಿಂದೆ ಯಾರೋ ಇದ್ದಾರೆ ಮತ್ತು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ವಿಪರ್ಯಾಸವೆಂದರೆ, ತಮ್ಮ ಬದುಕು ನಿಭಾಯಿಸುವುದಕ್ಕೆ, ತಮ್ಮ ಮನೆ ನಡೆಸುವುದಕ್ಕೆ ನಿತ್ಯ ಹೋರಾಡುತ್ತಿರುವವರು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಂಚು ಮಾಡುವವರಿಗಾಗಿ ಹೋರಾಡಬೇಕಾಗಿದೆ. ಧರ್ಮದ ಹೆಸರಿನಲ್ಲಿ ಅಮಾಯಕರು ನೆರೆಯವರ ಜೊತೆಗೇ ಕದನಕ್ಕಿಳಿಯುತ್ತಿದ್ಧಾರೆ. ಇವರು ಹೀಗೆ ಹೊಡೆದಾಡಿಕೊಂಡಷ್ಟೂ ಆತನ ಶಕ್ತಿ ಹೆಚ್ಚುತ್ತಿದೆ ಎನ್ನುತ್ತಾರೆ ರವೀಶ್ ಕುಮಾರ್.
ಈ ಕಾದಾಟ ಇಡೀ ಸಮಾಜವನ್ನೇ ರೋಗಗ್ರಸ್ಥವಾಗಿಸಿದೆ ಮತ್ತು ಸಮಾಜ ಇದನ್ನು ರಾಜಕೀಯ ಎಂದುಕೊಳ್ಳುತ್ತಿದೆ. ಈ ರೋಗದ ತಡೆಗೆ ಲಾಕ್ಡೌನ್ ಹೇರಲು ಯಾರೂ ಇಲ್ಲ. ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುತ್ತ, ಅಪಾಯಕಾರಿ ಮಟ್ಟದಲ್ಲಿ ದ್ವೇಷ ಹರಡಲಾಗುತ್ತಿದೆ. ಜೈಪುರ್ – ಮುಂಬೈ ಎಕ್ಸ್ಪ್ರೆಸ್ ರೈಲಿನೊಳಗೆ ಚೇತನ್ ಸಿಂಗ್ ಎಂಬ ಕಾನ್ಸ್ಟೇಬಲ್ ರೈಲ್ವೆ ಸುರಕ್ಷತಾ ಪಡೆಯ ಸಹಾಯಕ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಆತ ಕೂಡ ಇದೇ ರಾಜಕೀಯ ರೋಗಗ್ರಸ್ಥ ಸ್ಥಿತಿಯ ಭಾಗ.
ಆತನಿಗೆ ಮಾನಸಿಕ ಕಾಯಿಲೆಯಿತ್ತು ಎಂದು ಈಗ ಸಬೂಬು ಹೇಳಲಾಗುತ್ತಿದೆ. ಆದರೆ ಆತನಿಗಿರುವುದು ಮಾನಸಿಕ ಕಾಯಿಲೆಯಲ್ಲ, ಬದಲಾಗಿ ರಾಜಕೀಯ ಕಾಯಿಲೆ. ಈ ದೇಶದಲ್ಲಿರುವವರು " ಮೋದಿ ಮೋದಿ ಎನ್ನಬೇಕು, ಯೋಗಿ ಯೋಗಿ ಎನ್ನಬೇಕು" ಎನ್ನುವ ಅವನ ಈ ರಾಜಕೀಯ ಕಾಯಿಲೆಯೇ ಆತನನ್ನು ಕೊಲೆಗಾರನನ್ನಾಗಿಸಿದೆ.
ಆದರೆ, ಎಷ್ಟು ವಿಚಿತ್ರವೆಂದರೆ, ಈ ಘಟನೆಯನ್ನು ರೈಲ್ವೆ ಇಲಾಖೆ ಕಡೇ ಪಕ್ಷ ಖಂಡಿಸುವುದೂ ಇಲ್ಲ. ಇಂಥ ಕೃತ್ಯಗಳನ್ನು ಸಹಿಸುವುದಿಲ್ಲ ಎಂಬ ಒಂದು ಮಾತು ಕೂಡ ರೈಲ್ವೆ ಸಚಿವರಿಂದ ಬರುವುದಿಲ್ಲ. ತಮ್ಮದೇ ಇಲಾಖೆಯ ಅಧಿಕಾರಿಯೂ ಕೊಲೆಯಾಗಿದ್ದರೂ ರೈಲ್ವೆ ಸಚಿವರಿಂದ ಒಂದೇ ಒಂದು ಟ್ವೀಟ್ ಕೂಡ ಇಲ್ಲ. ಅವರು ಪ್ರಧಾನಿ ಮೋದಿಯ ಪ್ರವಾಸದ, ದೇವಸ್ಥಾನ ಭೇಟಿಗಳ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಒಬ್ಬ ಐ ಎ ಎಸ್ ಅಧಿಕಾರಿಯಾಗಿದ್ದು ಈಗ ಸಚಿವರಾಗಿರುವವರಿಗೆ ಇದಕ್ಕಿಂತ ನಾಚಿಕೆಗೇಡು ಸ್ಥಿತಿ ಬೇಕಾ ?
ದೇಶದಲ್ಲಿ ಹೀಗೆ ದ್ವೇಷ ಕಾರುವುದು, ನಿರ್ದಿಷ್ಟ ಸಮುದಾಯದ ವಿರುದ್ಧ ಅಸಹನೆ ತೋರಿಸುವುದು, ಕೊಲೆಗೈಯುವುದು ಈಚಿನ ದಿನಗಳಲ್ಲಿ ಸಾಮಾನ್ಯ ಆಗಿಬಿಟ್ಟಿದೆ. ಸಿಎಎ ವಿರುದ್ಧದ ಆಂದೋಲನ ನಡೆಯುತ್ತಿರುವಾಗ ಕೇಂದ್ರ ಸಚಿವರೇ ದೇಶ ವಿರೋಧಿಗಳಿಗೆ ಗುಂಡಿಕ್ಕಿ ಎಂದು ಹೇಳುತ್ತಾರೆ. ಅದರ ಬೆನ್ನಿಗೇ ಶಾಹಿನ್ ಬಾಗ್ನಲ್ಲಿ ಸಿಎಎ ವಿರೋಧಿ ಹೋರಾಟದ ವೇಳೆ ಒಬ್ಬ ಬಂದು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಾನೆ. ಇದು ಹಿಂದೂ ರಾಷ್ಟ್ರ ಎನ್ನುತ್ತಾನೆ. ಅಷ್ಟರ ಮಟ್ಟಿಗೆ ಧರ್ಮದ್ವೇಷ ಹಬ್ಬುತ್ತಿದೆ.
ಅಂಥವರೇ ಬಿಜೆಪಿಗೆ ಬೇಕಿದೆ. ಹಾಗಾಗಿಯೇ ಆತನ ಕೃತ್ಯದ ಬಗ್ಗೆಯಾಗಲೀ, ಚೇತನ್ ಸಿಂಗ್ ಎಂಬ ಕಾನ್ಸ್ಟೇಬಲ್ ದುಷ್ಟ ಕೃತ್ಯದ ಬಗ್ಗೆಯಾಗಲಿ ಇವರಾರೂ ತಕರಾರು ತೆಗೆಯುವುದಿಲ್ಲ. ಯಾರಾದರೂ ಬಿಜೆಪಿ ನಾಯಕರು ಚೇತನ್ ಸಿಂಗ್ ನಡೆಸಿದ ಹತ್ಯಾಕಾಂಡವನ್ನು ಖಂಡಿಸಿ ಹೇಳಿಕೆ ಕೊಟ್ಟಿದ್ದನ್ನು ನೀವು ನೋಡಿದ್ದೀರಾ ?. ಇದೆಲ್ಲದರ ಜೊತೆಗೆ ದ್ವೇಷ ಬಿತ್ತುವ, ದಿನದ 24 ತಾಸೂ ಹಿಂದು ಮುಸ್ಲಿಂ ಎಂದು ಬೊಬ್ಬೆ ಹೊಡೆಯುತ್ತ ಕಿಡಿ ಹಚ್ಚುವ ದುಷ್ಟ ಮಾಧ್ಯಮಗಳು. ಅತ್ಯಂತ ವಿಷಕಾರಿ ಭಾಷೆಯನ್ನು ಬಳಸುವ ಟಿವಿ ನಿರೂಪಕರು ಇನ್ನೂ ಅಸಹ್ಯ.
ಒಬ್ಬ ದ್ವೇಷ ಹರಡುವ ಆ್ಯಂಕರ್ ಅಮನ್ ಚೋಪ್ರಾ ಇದಕ್ಕೆಲ್ಲ ಶಾಶ್ವತ ಪರಿಹಾರ ಆಗಬೇಕು ಎಂದು ಹೇಳುತ್ತಾನೆ. ಶಾಶ್ವತ ಪರಿಹಾರ ಅಂದರೆ ಏನು? ಹಾಗೆ ಹೇಳಿದವರು ಜರ್ಮನಿಯಲ್ಲಿ 60 ಲಕ್ಷ ಯಹೂದಿಯರ ನರಮೇಧ ನಡೆಸಿದರು. ಹಾಗಾದರೆ ಅಮನ್ ಚೋಪ್ರಾ ಹೇಳುತ್ತಿರುವ ಶಾಶ್ವತ ಪರಿಹಾರ ಯಾವುದು ? ಆತ ರಿಲಯನ್ಸ್ ನ ಮುಖೇಶ್ ಅಂಬಾನಿಯವರ ಚಾನಲ್ ನ ಆಂಕರ್. ಮುಖೇಶ್ ಅಂಬಾನಿಗೆ ತನ್ನ ಚಾನಲ್ ನ ಆಂಕರ್ ಹೀಗೆ ಹೇಳುತ್ತಿರುವುದಕ್ಕೆ ಆಕ್ಷೇಪ ಇಲ್ಲವೇ ? ಹೀಗೆಯೇ ಟ್ವೀಟ್ ಮಾಡಿ ಎಂದು ಅವರು ಹೇಳಲು ಸಾಧ್ಯವೇ ಇಲ್ಲ. ಹಾಗಾದರೆ ಯಾಕೆ ಅಮನ್ ಚೋಪ್ರಾ ಇನ್ನೂ ಆ ಚಾನಲ್ ನಲ್ಲಿ ಮುಂದುವರೆದಿದ್ದಾನೆ ? ಆತನನ್ನು ಯಾಕೆ ಇನ್ನೂ ಮನೆಗೆ ಕಳಿಸಿಲ್ಲ ? ಮುಖೇಶ್ ಅಂಬಾನಿಯ ಶ್ರೀಮಂತಿಕೆ ಹಾಗು ಪ್ರಭಾವಕ್ಕೆ ಅಮನ್ ಚೋಪ್ರಾ ವಿರುದ್ಧ ಕ್ರಮ ಕೈಗೊಳ್ಳುವಷ್ಟು ಶಕ್ತಿ ಇಲ್ಲವೇ ?
ಬಿಜೆಪಿ, ಮಾಧ್ಯಮಗಳು ಮತ್ತು ಅವರೊಂದಿಗೆ ನಿಂತಿರುವ ಶಕ್ತಿಗಳು ದೇಶದಾದ್ಯಂತ ದ್ವೇಷದ ಬೆಂಕಿ ಹರಡಿವೆ. ಪ್ರೀತಿಯಿಂದ ಮಾತ್ರ ದೇಶದಲ್ಲಿ ಈ ಬೆಂಕಿಯನ್ನು ನಂದಿಸಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುತ್ತಿರುವುದು ನಿಜ. ಆದರೆ ರಾಹುಲ್ ಗಾಂಧಿಯವರ ಪಕ್ಷದ ಸರಕಾರಗಳಿರುವಲ್ಲಿ ಇದೇ ದ್ವೇಷ ಹರಡುವ ಚಾನಲ್ ಗಳು ಹಾಗು ಪತ್ರಿಕೆಗಳಿಗೆ ಕೋಟಿ ಗಟ್ಟಲೆಯ ಜಾಹೀರಾತು ನೀಡಲಾಗುತ್ತಿದೆ. ರಾಹುಲ್ ಗಾಂಧಿಯವರ ಪಕ್ಷದ ನಾಯಕರು ಇದೇ ದ್ವೇಷ ಪ್ರಚಾರದ ಚಾನಲ್ ಗಳು ಯಾವಾಗ ನಮ್ಮನ್ನು ಕರೀತಾರೆ ಎಂದು ಕಾದು ಕುಳಿತು ಹೋಗಿ ಅಲ್ಲಿ ಮಾತಾಡುತ್ತಾರೆ.
ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಲಾಗುತ್ತಿರುವ ದ್ವೇಷವೇ ಚೇತನ್ ಸಿಂಗ್ ಅಂಥವನು ಗುಂಡಿಕ್ಕಿ ಕೊಲ್ಲುವ ಮಟ್ಟಕ್ಕೆ ಹೋಗಲು ಕಾರಣ ಎಂದು ಜೈರಾಂ ರಮೇಶ್ ಹೇಳಿರುವುದೂ ಗಮಮನಾರ್ಹ. ಆದರೆ ಅವರದೇ ಪಕ್ಷದ ಸರಕಾರಗಳು ಈ ದ್ವೇಷ ಚಾನಲ್ ಗಳನ್ನು ಯಾಕೆ ಜಾಹೀರಾತು ಕೊಟ್ಟು ಪ್ರೋತ್ಸಾಹಿಸುತ್ತಿವೆ ಎಂದೂ ಅವರು ಟ್ವೀಟ್ ಮಾಡಬೇಕು. ಹಿಂಸೆ ಮತ್ತು ದ್ವೇಷ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಸಂಗತಿಗಳಾಗಿಬಿಟ್ಟಿವೆ. ಗೋದಿ ಮೀಡಿಯಾಗಳು ದ್ವೇಷ ಸೃಷ್ಟಿಸುವ ಹಾಗು ಹರಡುವ ಅಧಿಕೃತ ಕಾರ್ಖಾನೆಯಾಗಿ ಮಾರ್ಪಟ್ಟಿವೆ.
ಇಷ್ಟೆಲ್ಲಾ ಆದಮೇಲೆ ಪ್ರಧಾನಿ ಮೋದಿ ಬಿಜೆಪಿ ನಾಯಕರು ಮುಸ್ಲಿಂ ಮಹಿಳೆಯರಿಗೆ ರಾಕಿ ಕಟ್ಟಿ ಎಂದು ಹೇಳುತ್ತಿದ್ದಾರೆ. ಅಮಿತ್ ಶಾ , ಅನುರಾಗ್ ಠಾಕೂರ್, ಗಿರಿರಾಜ್ ಸಿಂಗ್, ಬಸವರಾಜ ಬೊಮ್ಮಾಯಿ, ಸಿಟಿರವಿ , ಪ್ರತಾಪ್ ಸಿಂಹ, ಯತ್ನಾಳ್, ಯಶ್ಪಾಲ್ ಸುವರ್ಣ - ಇವರೆಲ್ಲ ಯಾವ ಮುಖ ಇಟ್ಟುಕೊಂಡು ಮುಸ್ಲಿಂ ಮಹಿಳೆಯರ ಬಳಿ ಹೋಗ್ತಾರೆ ?
ಹೋಗಲಿ, ಪ್ರಧಾನಿ ಮೋದಿಯವರಾದರೂ ತಮ್ಮ ತವರು ರಾಜ್ಯ ಗುಜರಾತ್ ಗೆ ಹೋಗಿ ಬಿಲ್ಕಿಸ್ ಬಾನು ಎದುರು ನಿಂತು ಆಕೆಗೆ ರಾಕಿ ಕಟ್ಟಲು ಸಾಧ್ಯವೇ ? ಆ ರಾಜ್ಯದಲ್ಲಿ ಆಕೆಗೆ ಆಗಿರುವ ಘೋರ ಅನ್ಯಾಯಗಳ ಬಳಿಕ ಅಂತಹ ನೈತಿಕ ಧೈರ್ಯ ಅವರಿಗಿದೆಯೇ ?. ಈ ದ್ವೇಷದ ಬೆಂಕಿಯಲ್ಲಿ ಅಮಾಯಕರು ಬೆಂದುಹೋಗುತ್ತಿದ್ಧಾರೆ. ಮೊದಲ ಬಲಿಪಶುಗಳಾಗುವ ಅವರು ಇನ್ನಾದರೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರ ಮತ್ತು ಮಾಧ್ಯಮಗಳ ಸೂತ್ರದ ಪಾತ್ರಗಳಾಗುವುದರಿಂದ ತಪ್ಪಿಸಿಕೊಳ್ಳಬೇಕಿದೆ. ಬದುಕಲು ಮತ್ತು ನೆರೆಯವರನ್ನು ಪ್ರೀತಿಯಿಂದ ಕಾಣಲು ಇರುವ ದಾರಿ ಅದೊಂದೇ.