ಇನಿಂಗ್ಸ್ ನ ಮೊದಲ ಓವರ್ ನಲ್ಲಿ 4 ವಿಕೆಟ್: ಟಿ-20 ಬ್ಲಾಸ್ಟ್ ಟೂರ್ನಿಯಲ್ಲಿ ಶಾಹೀನ್ ಅಫ್ರಿದಿ ಅಮೋಘ ಬೌಲಿಂಗ್

Update: 2023-07-01 08:20 GMT

ಫೋಟೋ- Twitter@Sports_Himanshu

ಲಂಡನ್: ಈಗ ನಡೆಯುತ್ತಿರುವ T20 ಬ್ಲಾಸ್ಟ್ ಟೂರ್ನಿಯಲ್ಲಿ ಇನಿಂಗ್ಸ್ ನ ಮೊದಲ ಓವರ್ ನಲ್ಲಿ ವೇಗದ ಬೌಲರ್ ಶಾಹೀನ್ ಅಫ್ರಿದಿ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಅಮೋಘ ಪ್ರದರ್ಶನ ನೀಡಿದರು. ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು.

ಆದರೆ ಅವರು ಪ್ರತಿನಿಧಿಸಿದ ನಾಟಿಂಗ್ಹ್ಯಾಮ್ ಶೈರ್ ತಂಡವು 2 ವಿಕೆಟ್ ನಿಂದ ಸೋಲನುಭವಿಸಿ ಕ್ವಾರ್ಟರ್ ಫೈನಲ್ ತಲುಪುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿದೆ.

ಆರಂಭಿಕ ಬ್ಯಾಟರ್ ರಾಬ್ ಯೇಟ್ಸ್ 46 ಎಸೆತಗಳಲ್ಲಿ 65 ರನ್ ಗಳಿಸಿದ ಕಾರಣ ಬರ್ಮಿಂಗ್ಹ್ಯಾಮ್ ಬೇರ್ಸ್ ತಂಡವು 169 ರನ್ ಗುರಿಯನ್ನು 19.1 ಓವರ್ ಗಳಲ್ಲಿ ಯಶಸ್ವಿಯಾಗಿ ಚೇಸ್ ಮಾಡಿತು.

ಬರ್ಮಿಂಗ್ ಹ್ಯಾಮ್ ಇನಿಂಗ್ಸ್ ನ ಮೊದಲ ಓವರ್ ನಲ್ಲಿ ನಾಲ್ಕು ವಿಕೆಟ್ ಗಳನ್ನು ಕಬಳಿಸಿದ ಎಡಗೈ ವೇಗಿ ಅಫ್ರಿದಿ ನಾಟಿಂಗ್ ಹ್ಯಾಮ್ ಶೈರ್ ತಂಡಕ್ಕೆ ಕನಸಿನ ಆರಂಭವನ್ನು ನೀಡಿದರು. ಪಾಕಿಸ್ತಾನದ ವೇಗಿ ಅಫ್ರಿದಿ ಅವರು ನಾಯಕ ಅಲೆಕ್ಸ್ ಡೇವಿಸ್ (0), ಕ್ರಿಸ್ ಬೆಂಜಮಿನ್ (0), ಡಾನ್ ಮೌಸ್ಲಿ (1) ಹಾಗೂ ಎಡ್ ಬರ್ನಾರ್ಡ್ (0) ಅವರನ್ನು ಔಟ್ ಮಾಡಿದರು.

ಎರಡನೆ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ಶಾಹೀನ್ ಅಫ್ರಿದಿ, ಯಾರ್ಕರ್ ನೊಂದಿಗೆ ಡೇವಿಸ್ ರನ್ನು ಎಲ್ಬಿ ಬಲೆಗೆ ಬೀಳಿಸಿದರು, ನಂತರದ ಎಸೆತದಲ್ಲಿ ಬೆಂಜಮಿನ್ ಅವರ ಆಫ್-ಸ್ಟಂಪ್ ಅನ್ನು ಉರುಳಿಸಿದರು.

ಓವರ್ ನ 5 ನೇ ಎಸೆತದಲ್ಲಿ, ಶಾಹೀನ್ ಅವರು ಮೌಸ್ಲಿ ವಿಕೆಟ್ ಕಬಳಿಸಿದರು, ಒಲ್ಲಿ ಸ್ಟೋನ್ ಒಂದೇ ಕೈಯಿಂದ ಅದ್ಭುತ ಕ್ಯಾಚ್ ಪಡೆದರು. ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಅತ್ಯಾಕರ್ಷಕ ಯಾರ್ಕರ್ ಮೂಲಕ ಬರ್ನಾರ್ಡ್ ರನ್ನು ಪೆವಿಲಿಯನ್ ಗೆ ಅಟ್ಟಿದರು.

ಶಾಹೀನ್ ಅವರ ಅಮೋಘ ಬೌಲಿಂಗ್(4-29) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News