ಎನ್ ಸಿಪಿ ಶಾಸಕರ ತುರ್ತು ಸಭೆ ಕರೆದ ಅಜಿತ್ ಪವಾರ್
ಮುಂಬೈ: ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ರವಿವಾರ ಎನ್ ಸಿಪಿ ಶಾಸಕರ ತುರ್ತು ಸಭೆಗೆ ಕರೆದಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ ಬಗ್ಗೆ ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳ ನಡುವೆ ಈ ಸಭೆ ನಡೆಯಲಿದೆ.
ಪ್ರಸ್ತುತ ಪುಣೆಯಲ್ಲಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಮ್ಮುಖದಲ್ಲಿ ಜುಲೈ 6 ರಂದು ಸಭೆ ನಡೆಯಲಿದೆ ಎಂದು ಈ ಹಿಂದೆ ನಿರ್ಧರಿಸಲಾಗಿತ್ತು.
ಎನ್ ಸಿಪಿಯ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟೀಲ್ ಅವರು ಶರದ್ ಪವಾರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು, ಅವರು ತಮ್ಮ ನಿಗದಿತ ಪ್ರವಾಸ ಮತ್ತು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಅಜಿತ್ ಪವಾರ್ ಅವರು ಸಂಘಟನಾ ಹೊಣೆಗಾರಿಕೆ ಕೋರಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.
ದಿಲ್ಲಿಯಲ್ಲಿ ಬುಧವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷವು ಈ ಬಗ್ಗೆ ಚರ್ಚಿಸಿದ್ದು, ಎರಡು ತಿಂಗಳಲ್ಲಿ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ.