‘ಹರಕೆಯ ಕುರಿ’ಯಾಗಲು ನಾನು ಸಿದ್ಧನಿದ್ದೇನೆ’: ಗೋವಾ ಮುಖ್ಯಮಂತ್ರಿಗೆ ಎಕ್ಸ್ ಬಳಕೆದಾರನ ಬಹಿರಂಗ ಪತ್ರ
ಹೊಸದಿಲ್ಲಿ: ತನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ ಮತ್ತು ಸ್ಥಳೀಯ ವ್ಯವಹಾರಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಗೋವಾ ಪ್ರವಾಸೋದ್ಯಮ ಇಲಾಖೆಯು ತನ್ನ ವಿರುದ್ಧ ಪೋಲಿಸ್ ದೂರನ್ನು ದಾಖಲಿಸಿದ ಬಳಿಕ ಎಕ್ಸ್ ಬಳಕೆದಾರ ಹಾಗೂ ವಕೀಲ ರಾಮಾನುಜ ಮುಖರ್ಜಿಯವರು ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆಯುವ ಮೂಲಕ ತಿರುಗೇಟು ನೀಡಿದ್ದಾರೆ.
ಮುಖರ್ಜಿ ಈ ಹಿಂದೆ ಗೋವಾಕ್ಕೆ ವಿದೇಶಿ ಪ್ರವಾಸಿಗಳ ಭೇಟಿಗಳು ಗಣನೀಯವಾಗಿ ಕುಸಿದಿವೆ ಎಂದು ಆರೋಪಿಸಿ ಎಕ್ಸ್ ಪೋಸ್ಟ್‌ಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದನ್ನು ಅಲ್ಲಗಳೆದಿದ್ದ ರಾಜ್ಯ ಪ್ರವಾಸೋದ್ಯಮ ಇಲಾಖೆಯು ‘ಸಂಪೂರ್ಣ ತಪ್ಪು ಮಾಹಿತಿ’ ಎಂದು ಬಣ್ಣಿಸಿತ್ತು.
ಈಗ ಮುಖ್ಯಮಂತ್ರಿಗಳಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಮುಖರ್ಜಿ, ‘ಕ್ಷುಲ್ಲಕ ದೂರು ನನಗೆ ಸಿಟ್ಟನ್ನು ತರಿಸಿದೆ,ಆದರೆ ಅದು ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುವುದಾದರೆ ‘ಹರಕೆಯ ಕುರಿ’ಯಾಗಲು ನಾನು ಸಿದ್ಧನಿದ್ದೇನೆ ’ಎಂದು ಹೇಳಿದ್ದಾರೆ.
‘ನಾನು ಒಂದೆರಡು ವರ್ಷಗಳ ಕಾಲ ಗೋವಾದಲ್ಲಿ ವಾಸವಿದ್ದಾಗ ನಾನು ಭೇಟಿಯಾಗಿದ್ದ ಅಲ್ಲಿಯ ಹಲವು ಜನರ ಮುಖಗಳನ್ನು ನೆನಪಿಟ್ಟುಕೊಂಡಿದ್ದೇನೆ. ಇಂದು ಬೆಳಿಗ್ಗೆ ನಾನು ಸ್ವತಃ ಅವರ ದುಃಖ ಮತ್ತು ಆತಂಕವನ್ನು ಅನುಭವಿಸಿದ್ದೇನೆ. ನನ್ನಲ್ಲಿ ಹರಕೆಯ ಕುರಿಯನ್ನು ಕಂಡುಕೊಳ್ಳುವ,ಗೋವಾ ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟು ಮಾಡಲು ನಾನು ಕೆಲವು ಚೀನಿ ಪ್ರಚಾರ ಸೈಟ್‌ಗಳೊಂದಿಗೆ ಶಾಮೀಲಾಗಿದ್ದೆನೆಂದು ಬಿಂಬಿಸುವ ರಾಜಕಿಯ ಅಗತ್ಯವು ನಿಮಗಿದ್ದರೆ ಪರಿಣಾಮಗಳನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ. ಆದರೆ ದುರದೃಷ್ಟವಶಾತ್ ಇದು ನಿಮ್ಮ ಯಾವುದೇ ನೈಜ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಹೆಚ್ಚೆಂದರೆ ಇದು ನಿಮ್ಮ ಭಾವನೆಗಳಿಗೆ ತಾತ್ಕಾಲಿಕ ಬ್ಯಾಂಡ್ ಏಯ್ಡ್‌ನಂತೆ ಕಾರ್ಯ ನಿರ್ವಹಿಸಬಹುದು’ ಎಂದು ಸುದೀರ್ಘ ಎಕ್ಸ್ ಪೋಸ್ಟ್‌ನಲ್ಲಿ ಮುಖರ್ಜಿ ಬರೆದಿದ್ದಾರೆ.
ಈ ವರ್ಷ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಸಾವಂತ ಸರಕಾರದ ಸಚಿವರೂ ಮಾಧ್ಯಮಗಳಿಗೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು ಎಂದಿರುವ ಅವರು, ‘ಈ ಪ್ರಚಾರದ ಅಲೆಯು ಗೋವಾ ಪ್ರವಾಸೋದ್ಯಮವು ಮತ್ತೆ ತಲೆಯೆತ್ತಲು ಅತ್ಯಂತ ಅಗತ್ಯವಾಗಿರುವ ಬದಲಾವಣೆಗಳನ್ನು ಮಾಡಲು ನಿಮಗೆ ರಾಜಕೀಯ ಅವಕಾಶವನ್ನು ಒದಗಿಸುತ್ತದೆ ಎಂದು ನಾನು ನಿಜವಾಗಿಯೂ ಆಶಿಸಿದ್ದೇನೆ ’ ಎಂದು ಹೇಳಿದ್ದಾರೆ.
‘ಒಂದು ವೇಳೆ ನಾನು ಹಂಚಿಕೊಂಡಿರುವ ಮಾಹಿತಿಯು ತಪ್ಪಾಗಿದ್ದರೂ ಪೋಸ್ಟ್‌ನ್ನು ವೈರಲ್ ಮಾಡಿದ್ದು ಮಾಹಿತಿಯಲ್ಲ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳ ಸ್ಫೋಟಕ್ಕೆ ಕಾರಣವಾಗಿದ್ದರಿಂದ ಈ ವಿಚಾರ ವೈರಲ್ ಆಗಿದೆ. ಪ್ರವಾಸಿಗಳು ಗೋವಾಕ್ಕೆ ಭೇಟಿ ನೀಡಿದ್ದಾರೆ ಮತ್ತು ತಾವು ಮೋಸ ಹೋಗಿದ್ದೇವೆ ಎಂದು ಭಾವಿಸಿದ್ದಾರೆ,ಅವರು ತಮ್ಮ ಕುಂದುಕೊರತೆಗಳ ಬಗ್ಗೆ ಮಾತನಾಡಿದ್ದಾರೆ ’ಎಂದು ಮುಖರ್ಜಿ ಪತ್ರದಲ್ಲಿ ಬರೆದಿದ್ದಾರೆ.
ಸಮಸ್ಯೆಯ ಮೂಲವನ್ನು ಬಗೆಹರಿಸುವಂತೆ ಗೋವಾ ಮುಖ್ಯಮಂತ್ರಿಗೆ ಆಗ್ರಹಿಸಿರುವ ಮುಖರ್ಜಿ,ಯಾವುದೇ ತ್ವರಿತ ಪರಿಹಾರಗಳಿಲ್ಲ ಎಂದು ಹೇಳಿದ್ದಾರೆ.