ಸಂವಿಧಾನದ ' ಕೆಂಪು ಪುಸ್ತಕ'ವನ್ನು ʼನಗರ ನಕ್ಸಲಿಸಂ'ಗೆ ಹೋಲಿಸಿದ ಪ್ರಧಾನಿ ಮೋದಿಗೆ ಖರ್ಗೆ ತರಾಟೆ
ಹೊಸದಿಲ್ಲಿ: ಸಂವಿಧಾನದ ʼಕೆಂಪು ಪುಸ್ತಕʼವನ್ನು "ನಗರ ನಕ್ಸಲಿಸಂ" ಗೆ ಹೋಲಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, 2017ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಇದೇ ಪ್ರತಿಯನ್ನು ನೀಡಿದ್ದರು ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಪೋಟೋವನ್ನು ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜಾತಿಗಣತಿಗಾಗಿ ತಮ್ಮ ಪಕ್ಷದ ಬೇಡಿಕೆಯು ಜನರನ್ನು ವಿಭಜಿಸುವುದಕ್ಕಾಗಿ ಅಲ್ಲ, ವಿವಿಧ ಸಮುದಾಯಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಜಾತಿಗಣಯಿಂದ ಅರ್ಥಮಾಡಿಕೊಳ್ಳಬಹುದು ಮತ್ತು ಅವರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಯಲ್ಲಿ' ಕೆಂಪು ಪುಸ್ತಕ'ವನ್ನು ಹಿಡಿದು ನಗರ ನಕ್ಸಲರು ಮತ್ತು ಅರಾಜಕತಾವಾದಿಗಳ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ಆರೋಪಿಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತಮ್ಮ ರ್ಯಾಲಿಗಳಲ್ಲಿ ಸಂವಿಧಾನದ ಸಂಕ್ಷಿಪ್ತ ಆವೃತ್ತಿಯನ್ನು ಮಾತ್ರ ಪ್ರದರ್ಶಿಸಿದ್ದಾರೆ. ಕೆಂಪು ಕೈಪಿಡಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.