ಬೆಳ್ತಂಗಡಿ: ಸ್ಮಶಾನದ ಕೊರತೆಯ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ
ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದರಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು, ಈ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸ್ಮಶಾನಕ್ಕಾಗಿ ಸ್ಥಳ ಮಂಜೂರುಗೊಳಿಸುವಂತೆ ಹಲವಾರು ಗ್ರಾಮ ಸಭೆಗಳಲ್ಲಿ ಬೇಡಿಕೆ ಇಟ್ಟರೂ ಜನಪ್ರತಿನಿಧಿಗಳು ಯಾರೂ ಕೂಡಾ ಗ್ರಾಮಸ್ಥರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
(ಶುಕ್ರವಾರ) ಜುಲೈ 14 ರಂದು ಮೃತಪಟ್ಟ ಜನತಾ ಕಾಲನಿ ನಿವಾಸಿಯೊಬ್ಬರ ಮೃತ ದೇಹವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟನೆಗೆ ಊರವರು ಮುಂದಾಗಿದ್ದಾರೆ. ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ನೆರಿಯ ಗ್ರಾಮ ಪಂಚಾಯತ್ ಎದುರೇ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದ್ದು, ಆದರೆ ಆಕ್ರೋಶಿತ ಗ್ರಾಮಸ್ಥರು ‘ನಮಗೆ ಜಾಗ ಇವತ್ತೇ ನಿಗದಿ ಪಡಿಸಬೇಕು. ಇಷ್ಟು ವರ್ಷ ಬೇಡಿಕೆ ಈಡೇರಿಕೆ ಆಗಿಲ್ಲ. ಆದ್ದರಿಂದ ಸ್ಮಶಾನ ಆಗುವ ತನಕ ಪಂಚಾಯತ್ ಗೆ ಬೀಗ ಹಾಕಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತಗೊಂಡಿದ್ದಾರೆ.