ಆ್ಯಂಟಿ ಕಮ್ಯುನಲ್ ವಿಂಗ್ ಗೆ ಸಿಸಿಬಿಯ ಎಸಿಪಿ ಉಸ್ತುವಾರಿ; ಮಂಗಳೂರು ಕಮಿಷನರ್ ಆದೇಶ

Update: 2023-06-15 10:24 GMT

ಮಂಗಳೂರು, ಜೂ.15: ಮಂಗಳೂರಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರನ್ನು ಮತ್ತು ಅನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ರಚನೆಗೆ ತಯಾರಿ ನಡೆದಿದ್ದು, ನಗರ ಅಪರಾಧ ವಿಭಾಗ(ಸಿಸಿಬಿ) ಸಹಾಯಕ ಪೊಲೀಸ್ ಆಯುಕ್ತರಿಗೆ ಇದರ ಉಸ್ತುವಾರಿಯನ್ನು ನೀಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಆದೇಶ ನೀಡಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅನೈತಿಕ ಪೊಲೀಸ್ಗಿರಿ ಪ್ರಕರಣಗಳನ್ನು ಹಾಗೂ ಯಾವುದೇ ರೀತಿಯ ಕೋಮು ಗಲಭೆಗಳನ್ನು ತಡೆಗಟ್ಟುವ ಸಲುವಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸುವುದು ಆ್ಯಂಟಿ ಕಮ್ಯುನಲ್ ವಿಂಗ್ನ ಉದ್ದೇಶವಾಗಿದೆ ಎಂದು ಕಮೀಷನರ್ ಆದೇಶದಲ್ಲಿ ತಿಳಿಸಿದ್ದಾರೆ.

ಜೂ.6ರಂದು ಮಂಗಳೂರಿನಲ್ಲಿ ನಡೆದ ನಗರದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿನಲ್ಲಿ ಅನೈತಿಕ ಪೊಲೀಸ್ಗಿರಿ ಹೆಚ್ಚು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಆ್ಯಂಟಿ ಕಮ್ಯುನಲ್ ವಿಂಗ್ ರಚನೆಯ ಬಗ್ಗೆ ಪ್ರಸ್ತಾಪಿಸಿದ್ದರು.

ಮಂಗಳೂರು ನಗರವು ಪುರಾತನ ಮತ್ತು ಪಾರಂಪರಿಕ ನಗರವಾಗಿದ್ದು, ಇಲ್ಲಿ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿರುವುದರಿಂದ ವಿದೇಶಿಯರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ನಗರ ಪ್ರದೇಶದಲ್ಲಿ ಅನೇಕ ವಿದ್ಯಾಸಂಸ್ಥೆಗಳದ್ದು ರಾಜ್ಯ, ಅಂತರ್ ರಾಜ್ಯ ಮತ್ತು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುತ್ತಾರೆ. ಮಂಗಳೂರು ನಗರ ವ್ಯಾಪ್ತಿಯು ಕೋಮು ಸೌಹಾರ್ದತೆ ವಿಚಾರದಲ್ಲಿ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಸಣ್ಣ ಪುಟ್ಟ ಮತೀಯ ಘಟನೆಗಳು ವಿಕೋಪಕ್ಕೆ ಹೋಗಿರುವ ಸನ್ನಿವೇಶಗಳು ಈ ಹಿಂದೆ ನಡೆದಿದೆ. ನಗರದಲ್ಲಿ ಅನೈತಿಕ ಪೊಲೀಸ್ಗಿರಿ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾದ ಸಮಯದಲ್ಲಿ ಅಶಾಂತಿಯ ವಾತಾವರಣ ಉಂಟಾಗಿರುತ್ತದೆ.

ಆ್ಯಂಟಿ ಕಮ್ಯುನಲ್ ವಿಂಗ್ನ ಕೆಲಸ ಏನು?

*ನಗರದಲ್ಲಿ ನಡೆಯಬಹುದಾದ ಅನೈತಿಕ ಪೊಲೀಸ್ಗಿರಿ ಸಮಸ್ಯೆಯನ್ನು ನಿಭಾಯಿಸುವುದು.

*ನಗರದಲ್ಲಿ ಈ ಹಿಂದೆ ವರದಿಯಾಗಿರುವ ಕೋಮು ವಿಚಾರಕ್ಕೆ ಸಂಬಂಧಿಸಿದ ಎಲ್ಲ ಕೊಲೆ, ಕೊಲೆ ಪ್ರಯತ್ನ, ದೊಂಬಿ ಪ್ರಕರಣಗಳು ಸೇರಿದಂತೆ ಅನೈತಿಕ ಪೊಲೀಸ್ಗಿರಿ , ಗೋವುಗಳ ಕಳ್ಳತನ, ಅಕ್ರಮ ಗೋ-ಸಾಗಾಟ, ಗೋವಧೆ ಮುಂತಾದ ಪ್ರಕರಣಗಳನ್ನು ಪರಿಶೀಲಿಸಿ ಅವುಗಳಲ್ಲಿ ಆರೋಪಿಗಳಾಗಿ ಗುರುತಿಸಿಕೊಂಡವರ ಚಲನವಲನಗಳ ಬಗ್ಗೆ ಪ್ರತಿನಿತ್ಯ ನಿಗಾವಹಿಸಿ ಅವರ ವಿರುದ್ಧ ಭದ್ರತಾ ಕಾಯ್ದೆಯಡಿ ಮುಚ್ಚಳಿಕೆ ಪಡೆದುಕೊಳ್ಳುವುದರ ಬಗ್ಗೆ ಕರ್ತವ್ಯ ನಿರ್ವಹಿಸುವುದು.

*ಕೋಮು ವಿಚಾರಕ್ಕೆ ಸಂಬಂಧಿಸಿ ಕಾರ್ಯಾಚರಿಸುತ್ತಿರುವ ಎಲ್ಲ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ,ನಿಗಾವಹಿಸುವುದು.

ಎಸಿಡಬ್ಲ್ಯುನಲ್ಲಿ ಯಾರೆಲ್ಲಾ ಇರುತ್ತಾರೆ ?

ನಗರದ ಅಪರಾಧ ವಿಭಾಗದ (ಸಿಸಿಐ) ಸಹಾಯಕ ಪೊಲೀಸ್ ಆಯುಕ್ತರು ಈ ತಂಡದ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿರುವ ಆ್ಯಂಟಿ ಕಮ್ಯುನಲ್ ವಿಂಗ್ನಲ್ಲಿ ಮಂಗಳೂರು ನಗರದ ವಿಶೇಷ ಘಟಕದ(ಸಿಎಸ್ಬಿ) ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಸದಸ್ಯರಾಗಿರುತ್ತಾರೆ. ಇವರು ನಗರದಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟು ಮಾಡುವ ಪ್ರಕರಣಗಳ ಕುರಿತು ಕಾಲಕಾಲಕ್ಕೆ ವಿಶ್ಲೇಷಣೆ ಮಾಡಿ ಆರೋಪಿಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಗಮನಹರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News