ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Update: 2023-11-30 15:44 GMT

ಬೆಂಗಳೂರು: ಕೇಂದ್ರ ಸರಕಾರದಿಂದ ಬರ ಪರಿಹಾರ ಸಂಬಂಧ ಯಾವುದೇ ಬೆಳವಣಿಗೆ ನಡೆಯದ ಹಿನ್ನೆಲೆ ರಾಜ್ಯ ಸರಕಾರವೇ ಮೊದಲ ಕಂತನ್ನು ಬಿಡುಗಡೆ ಮಾಡಿದ್ದು, ಅರ್ಹ ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರಕಾರ ಮೊದಲ ಕಂತು ಬಿಡುಗಡೆ ಮಾಡಿದ್ದು, ಅದರಂತೆ ಈಗ ಮೊದಲ ಕಂತು ಅರ್ಹ ರೈತರಿಗೆ ತಲಾ 2000 ರೂ, ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಇನ್ನೂ, ಕೇಂದ್ರ ಸರಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಇಲ್ಲ. ರಾಜ್ಯದಿಂದ ಮೂವರು ಸಚಿವರು ಹೊಸದಿಲ್ಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರದಿಂದ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನ ಉದ್ಯೋಗ ಕೊಡಲು ಅನುಮತಿ ಕೋರಲಾಗಿತ್ತು. ಕೇಂದ್ರ ಸರಕಾರ ಇದಕ್ಕೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 18171.44 ಕೋಟಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರಕಾರ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವಿಗೆ 327 ಕೋಟಿ ರೂ. ಬಿಡುಗಡೆ, 780 ಕೋಟಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದೆ. ಅಲ್ಲಿಂದ ಅವರೂ ತಹಶೀಲ್ದಾರ್ ಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಅದೇ ರೀತಿ, ಯಾವ ತಾಲ್ಲೂಕುಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ನಿರ್ವಹಿಸಿದ್ದೇವೆ. ಹಲವು ತಾಲ್ಲೂಕುಗಳ 60 ಹಳ್ಳಿಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದೇವೆ. ಹೊರ ರಾಜ್ಯಕ್ಕೆ ಮೇವು ಹೋಗದಂತೆ ತಡೆದಿದ್ದೇವೆ. ಮೇವಿನ ಬೀಜ ವಿತರಣೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ನಮ್ಮ ತೆರಿಗೆ ಹಣ ವಾಪಸ್ಸು ಕೊಟ್ಟರೆ ಸಾಕು..!

ಕೇಂದ್ರ ಸರಕಾರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಸ್ಸು ಕೊಟ್ಟರೆ ಸಾಕು. ಅಲ್ಲದೆ, ಕೇಂದ್ರದ ಬರ ತಂಡ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡವನ್ನು ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. 4,663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೇವೆ.ಜತೆಗೆ, ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಆದರೆ, ಇವತ್ತಿನವರೆಗೂ ಕೇಂದ್ರ ಸಭೆಯನ್ನೇ ನಡೆಸಿಲ್ಲ. ಸಮಯ ಕೇಳಿದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News