ದ.ಕ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ವಿಕೇಂದ್ರೀಕೃತ ಯೋಜನೆ; ಜೀವಹಾನಿ ತಡೆಗೆ ಪ್ರಥಮ ಆದ್ಯತೆ: ಡಿ. ಸಿ ಮುಲ್ಲೈ ಮುಗಿಲನ್
ಮಂಗಳೂರು, ಜು.28;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ವಿಕೇಂದ್ರೀಕೃತ ಯೋಜನೆ ರೂಪಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಹಿಂದೆ ವಿಪತ್ತು ನಿರ್ವಹಣೆ ಜಿಲ್ಲಾ ಕೇಂದ್ರ ದ ಮೂಲಕ ನಡೆಸುವ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯನ್ನು ಬದಲಾಯಿಸಿ ವಿಪತ್ತು ನಿರ್ವಹಣೆಗೆ ಜಿಲ್ಲೆಯಲ್ಲಿ 296 ನೋಡಲ್ ಕೇಂದ್ರ ಗಳನ್ನುರಚಿಸಲಾಗುವುದು. ಜಿಲ್ಲೆಯ 223 ಗ್ರಾಮ ಪಂಚಾಯತ್, 13ಸ್ಥಳೀಯಾಡಳಿತ ಸಂಸ್ಥೆ ಗಳು, 60 ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ತಲಾ ಒಂದು ವಿಪತ್ತು ನಿರ್ವಹಣಾ ಕೇಂದ್ರ ರಚಿಸಲಾ ಗುವುದು ಎಂದು ತಿಳಿಸಿದರು.
ಈ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯ ಹೊಣೆಗಾರಿಕೆ ನೀಡಲಾಗುವುದು. ಜಿಲ್ಲೆಯ 25 ಎನ್ ಡಿ ಆರ್ ಎಫ್,38 ಎಸ್ ಡಿ ಆರ್ ಎಫ್ ಮತ್ತು 190 ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಹಾಗೂ 74 ಗೃಹ ರಕ್ಷಕ ದಳದ ಸಿಬ್ಬಂದಿ ಗಳನ್ನು ನಿಯೋಜಿಸಲಾಗುವುದು ಎಂದರು.
ಈ ಬಾರಿ ಮಳೆಗಾಲದಲ್ಲಿ ಇದುವರೆಗೆ 7 ಜೀವ ಹಾನಿಯಾಗಿದೆ. ಈ ಪೈಕಿ 5ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗುಡ್ಡ ಕುಸಿತದ ಹಿನ್ನಲೆಯಲ್ಲಿ 7ಮನೆಗಳ 35 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ದ.ಕ ಜಿಲ್ಲೆಯಲ್ಲಿ 87 ಕಡೆ ಗುಡ್ಡ ಕುಸಿತದ ಭೀತಿ ಇರುವ ಪ್ರದೇಶಗಳಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಪಾಯಕಾರಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಚಾರಣ ನಿಷೇಧಿಸಲಾಗಿದೆ. ಜಿಲ್ಲಾ ಡಳಿತದ ಮೂಲಕ ಗುರುತಿಸಲಾದ ಅಪಾಯ ಕಾರಿ ಸ್ಥಳಗಳಲ್ಲಿ ನೀಡಲಾದ ಸೂಚನೆಗಳನ್ನು ನಿರ್ಲಕ್ಷಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಜೀವ ಹಾನಿಯನ್ನು ತಡೆಯಲು ಸಾಕಷ್ಟು ಮುಂಜಾಗೃತಾ ಕ್ರಮ ಕೈ ಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಜಿಲ್ಲಾ ಡಳಿತಕ್ಕೆ ಮಾಹಿತಿ ನೀಡಲು 1077,ತುರ್ತಾಗಿ ಪೊಲೀಸರಿಗೆ ಮಾಹಿತಿ ನೀಡಲು 112 ಸಂಖ್ಯೆ ಸಹಾಯವಾಣಿ ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಜೈನ್ ಹಾಗೂ ಎಸ್ಪಿ ರಿಷ್ಯಂತ್ ಉಪಸ್ಥಿತರಿದ್ದರು.