ಕ್ರೀಡಾರಂಗದ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ: ದ.ಕ ಜಿಲ್ಲಾಧಿಕಾರಿ
ಮಂಗಳೂರು, ಜು.3: ಎಲ್ಲ ಕ್ಷೇತ್ರಗಳಲ್ಲಿ ಮಾಡುವ ಸಾಧನೆಗಿಂತ ಕ್ರೀಡಾರಂಗದಲ್ಲಿ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಭಿಪ್ರಾಯಪಟ್ಟಿದ್ದಾರೆ.
ಜರ್ಮನಿಯ ಬರ್ಲಿನ್ನಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ನಲ್ಲಿ ಚಿನ್ನ ಪಡೆದ ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆಯ ವಿದ್ಯಾರ್ಥಿ ಹರೀಶ್ ಅವರನ್ನು ಮಂಗಳೂರಿನ ಪುರಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಅಭಿನಂದಿಸಿ ಮುಲ್ಲೈ ಮುಹಿಲನ್ ಅವರು ಮಾತನಾಡುತ್ತಿದ್ದರು.
ಕ್ರೀಡಾರಂಗದಲ್ಲಿ ಯಶಸ್ಸು ಸುಲಭವಾಗಿ ಸಿಗದು. ಕ್ರೀಡಾಪಟುವಾಗಿ ಒಬ್ಬ ರೂಪುಗೊಳ್ಳಬೇಕಾದರೆ ಆತನಿಗೆ ಹೆತ್ತವರು, ಕೋಚ್ ಹಾಗೂ ಎಲ್ಲರ ಪರಿಶ್ರಮ ಮತ್ತು ಬೆಂಬಲ ಬೇಕಾಗುತ್ತದೆ ಎಂದರು.
ಸಾನಿಧ್ಯ ವಸತಿಯುತ ಶಾಲೆಯು ವಿಶಿಷ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಶ್ರಮಿಸುವ ಜೊತೆಗೆ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸುವ ಕಡೆಗೆ ಹೆಜ್ಜೆ ಇರಿಸಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾತನಾಡಿ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡುವುದು ಕಷ್ಟ. ಹೀಗಿರುವಾಗ ಸ್ಪೆಷಲ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ 3 ಚಿನ್ನ ಮತ್ತು 1 ಬೆಳ್ಳಿ ಪಡೆದ ಹರೀಶ್ ಸಾಧನೆ ಅನನ್ಯ ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್ ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ಡಾ.ವಸಂತ ಶೆಟ್ಟಿ ಅವರು, ವಿದ್ಯಾರ್ಥಿ ಹರೀಶ್ನನ್ನು ಕೋಚ್ ಗಳಾದ ಪ್ರೇಮನಾಥ್ ಉಳ್ಳಾಲ್, ಸರಸ್ವತಿ ಪುತ್ರನ್ , ವಿಶಾಲ್ ಅವರು ಉತ್ತಮ ಕ್ರೀಡಾಪಟುವಾಗಿ ರೂಪಿಸಿದ್ದಾರೆ ಎಂದರು.
ಮಾಜಿ ಮೇಯರ್ ಮಾಹಾಬಲ ಮಾರ್ಲ ,ಹರೀಶ್ ತಾಯಿ ಗೀತಾ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಮತ್ತು ಸಬಲೀಕರಣ ಇಲಾಖಾ ಅಧಿಕಾರಿ ಗೋಪಾಲಕೃಷ್ಣ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.