ಬೆಳ್ತಂಗಡಿ: ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಸಂಕಷ್ಟದಲ್ಲಿ ಅರಣ್ಯವಾಸಿಗಳು
ಬೆಳ್ತಂಗಡಿ: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜುಲೈ 26 ರ ಬುಧವಾರ ಕುಸಿದಿರುವ ಬಗ್ಗೆ ವರದಿಯಾಗಿದೆ.
ಇದು ಸುಮಾರು 30 ಅರಣ್ಯವಾಸಿ ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಸೇತುವೆಯಾಗಿದೆ. ಸುಮಾರು 50 ವರ್ಷದ ಹಿಂದೆ ನಿರ್ಮಾಣ ಮಾಡಲಾದ ಈ ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದೆ. ಅರಣ್ಯವಾಸಿಗಳು ಈ ಸೇತುವೆ ಮೂಲಕವೇ ಸಂಚಾರ ಮಾಡುತ್ತಿದ್ದು, ಇದೀಗ ಸೇತುವೆ ಕುಸಿದಿರುವುದರಿಂದ ತೊಂದರೆಯಾಗಿದೆ. ಇನ್ನು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ಮೂರು ವರ್ಷದ ಹಿಂದೆ ಕುಕ್ಕುಜೆ ಸಮೀಪದ ಸೇತುವೆ ಇದೇ ರೀತಿ ಕುಸಿತವಾಗಿತ್ತು. ನಂತರ ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಕಾಡಬಾಗಿಲು ಸೇತುವೆಯನ್ನೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೂ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ. ಇದೀಗ ಸೇತುವೆ ಕುಸಿತ ಆಗಿರುವುದರಿಂದ ಸಂಪರ್ಕವೇ ಸಾಧ್ಯವಿಲ್ಲದಂತಾಗಿದೆ.