ಮಂಗಳೂರು: ಅನೈತಿಕ ಪೊಲೀಸ್ ಗಿರಿ ಪ್ರಕರಣ; ಮೂವರಿಗೆ ಗಡಿಪಾರು ನೋಟಿಸ್

Update: 2023-07-21 09:31 GMT

ಮಂಗಳೂರು, ಜು.21: ಸಮಾಜದಲ್ಲಿ ಅನೈತಿಕ ಗುಂಡಾಗಿರಿಯಲ್ಲಿ ಪದೇ ಪದೇ ತೊಡಗಿಕೊಳ್ಳುವ ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆದು ಅಪರಾಧ ಪ್ರಕರಣದ ಆರೋಪಿಗಳ ಮೇಲೆ ಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು, ಕಾರ್ಯಕರ್ತರು ಎಂಬುದು ನಮಗೆ ಮುಖ್ಯವಲ್ಲ. ನಮಗೆ ಅವರು ಆರೋಪಿಗಳು ಮಾತ್ರ ಎಂದು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಹೇಳಿದ್ದಾರೆ.

ಬಜರಂಗದಳದ ಮೂವರು ಕಾರ್ಯಕರ್ತರಿಗೆ ಗಡೀಪಾರಿಗೆ ನೋಟೀಸು ನೀಡಲಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವರ್ಷದಲ್ಲಿ ಈಗಾಗಲೇ 60 ಇಂತಹ ರೌಡಿಗಳನ್ನು ಗಡೀಪಾರಿಗೆ ಕ್ರಮ ವಹಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ. ಈಗಾಗಲೇ ಮೂವರು ಮಾತ್ರ ಅಲ್ಲ, ಅದಕ್ಕಿಂತ ಹೆಚ್ಚಿನ ಮಂದಿಯ ಮೇಲೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಅನೈತಿಕ ಗೂಂಡಾಗಿರಿಗೆ ಸಂಬಂಧಿಸಿ ಆ ಮೂವರ ಮೇಲೆ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಗಡೀಪಾರಿಗೆ ಸಂಬಂಧಿಸಿ ಠಾಣೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಅದಕ್ಕೆ ಪೂರಕವಾಗಿ ಕ್ರಮ ವಹಿಸಲಾಗುತ್ತಿದೆ. ನೋಟೀಸು ಜಾರಿಯಾಗಿದ್ದು, ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಬೈಕಂಪಾಡಿ ಬಳಿ ದ್ವಿಚಕ್ರ ಸವಾರರೊಬ್ಬರು ಗುಂಡಿ ತಪ್ಪಿಸುವ ಭರದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ತನಿಖೆ ಹಂತದಲ್ಲಿ ಎನ್‌ಎಚ್‌ಎಐಗೆ ನೋಟೀಸು ಮಾಡಲಾಗುತ್ತದೆ. ಅವರಿಂದ ಹೇಳಿಕೆ ಪಡೆಯಲಾಗುವುದು. ಎಲ್ಲೆಲ್ಲಾ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಅಲ್ಲಿ ಸಂಬಂಧಪಟ್ಟವರಿಗೆ ಫೋಟೋ ಮೂಲಕ ಪತ್ರವ್ಯವಹಾರ ಮಾಡಲಾಗಿದೆ. ನಗರದಲ್ಲಿ ಸುಮಾರು 100ಕಡೆಗಳಲ್ಲಿ ಇಂತಹ ಪ್ರದೇಶಗಳನ್ನು ಗುರುತಿಸಲಾಗಿದೆ. ಶೀಘ್ರವಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಲೋನ್ ಆ್ಯಪ್‌ಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂಬ ಬಗ್ಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಯಾವುದೇ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News