ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭ

Update: 2023-07-01 08:23 GMT

ನೂತನ ಸಂಸತ್ ಕಟ್ಟಡ, Photo: Twitter

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆರಂಭವಾಗಲಿದ್ದು, ಆಗಸ್ಟ್ 11ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಅಧಿವೇಶನವು ಹಳೆಯ ಸಂಸತ್ ಕಟ್ಟಡದಲ್ಲಿ ಆರಂಭವಾಗಬಹುದಾದರೂ, ಅದು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಒಮ್ಮೆ ಅದು ನಡೆದರೆ, ಹೊಸ ಸಂಸತ್ತು ಉದ್ಘಾಟನೆಯಾದ ನಂತರ ನಡೆಯುತ್ತಿರುವ ಮೊದಲ ಅಧಿವೇಶನವಾಗಲಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಕಣಕ್ಕಿಳಿಯಲು ವಿರೋಧ ಪಕ್ಷಗಳು ಕಸರತ್ತು ನಡೆಸುತ್ತಿರುವುದರಿಂದ ಅಧಿವೇಶನ ಬಿರುಸಿನಿಂದ ಕೂಡಿರುವ ನಿರೀಕ್ಷೆಯಿದೆ.

ಅಲ್ಲದೆ, ಏಕರೂಪ ನಾಗರಿಕ ಸಂಹಿತೆಗಾಗಿ ಪ್ರಧಾನಿ ಮೋದಿ ಕರೆ ನೀಡಿರುವ ಸಮಯದಲ್ಲಿ ಹಾಗೂ ಈ ವಿಷಯದ ಕುರಿತು ಸಮಾಲೋಚನೆಗಳನ್ನು ಹೆಚ್ಚಿಸುವ ಕ್ರಮಗಳ ನಡುವೆ ಸಂಸತ್ತು ಅಧಿವೇಶನ ಆರಂಭವಾಗಲಿದೆ.

"ಸಂಸತ್ತಿನ ಮುಂಗಾರು ಅಧಿವೇಶನವು 2023, ಜುಲೈ 20 ರಿಂದ ಆರಂಭವಾಗುತ್ತದೆ ಹಾಗೂ ಆಗಸ್ಟ್ 11 ರವರೆಗೆ ಮುಂದುವರಿಯುತ್ತದೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರಗಳು ಹಾಗೂ ಇತರ ವಿಷಯಗಳ ಚರ್ಚೆಗೆ ಕೊಡುಗೆ ನೀಡಲು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತೇನೆ" ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.

ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರದ (ತಿದ್ದುಪಡಿ) ಸುಗ್ರೀವಾಜ್ಞೆಗೆ ಬದಲಿಯಾಗಿ ಸರಕಾರವು ಅಧಿವೇಶನದಲ್ಲಿ ಮಸೂದೆಯನ್ನು ತರುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News