ಕೊಲಂಬೊಕ್ಕೆ ಆಗಮಿಸಿದ ಟೀಮ್ ಇಂಡಿಯಾ; ಪಾಕಿಸ್ತಾನ ವಿರುದ್ಧ ಏಶ್ಯಕಪ್ ಆರಂಭಿಕ ಪಂದ್ಯಕ್ಕೆ ತಯಾರಿ
ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್ ತಂಡ ಬುಧವಾರ ಕೊಲಂಬೊಕ್ಕೆ ತಲುಪಿದ್ದು, ಬಹುನಿರೀಕ್ಷಿತ ಏಶ್ಯಕಪ್-2023ರ ಅಭಿಯಾನಕ್ಕೆ ತನ್ನ ತಯಾರಿಯನ್ನು ಆರಂಭಿಸಲಿದೆ.
ಸೆಪ್ಟಂಬರ್ 2ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಭಾರತ ತಂಡ ಟೂರ್ನಮೆಂಟ್ನಲ್ಲಿ ತನ್ನ ಹೋರಾಟ ಆರಂಭಿಸಲಿದೆ.
ಆಗಮನದ ಗದ್ದಲದ ನಡುವೆ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಂಭಾಷಣೆಯಲ್ಲಿ ಮಗ್ನರಾಗಿದ್ದರು. ತಂಡದ ಬಸ್ಸಿನೊಳಗೆ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜ, ವೇಗಿ ಮುಹಮ್ಮದ್ ಶಮಿ ಹಾಗೂ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಗು ವಿನಿಮಯ ಮಾಡಿಕೊಳ್ಳುತ್ತಾ, ತಮಾಷೆಯ ಚರ್ಚೆಗಳಲ್ಲಿ ಮುಳುಗಿರುವ ದೃಶ್ಯ ಕಂಡುಬಂತು.
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತೀಯ ತಂಡವು ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ಸೇವೆಯಿಂದ ವಂಚಿತವಾಗಿದೆ. ರಾಹುಲ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಕಾರ ಸೆಪ್ಟಂಬರ್ 4ರ ತನಕ ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಉಳಿಯಲಿದ್ದಾರೆ.