ಉಡುಪಿ: ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಪ್ರಕರಣ; ವಿಡಿಯೋ ವೈರಲ್ ಆಗಿಲ್ಲ, ಬ್ಲಾಕ್ಮೇಲ್ ಮಾಡಿಲ್ಲ: ಎಸ್ಪಿ ಸ್ಪಷ್ಟನೆ
‘ಸುಳ್ಳು ಮಾಹಿತಿಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಸೃಷ್ಠಿಸಬೇಡಿ. ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್ ಹಾಕಬೇಡಿ. ನಿಮ್ಮಲ್ಲಿ ಖಚಿತ ಮಾಹಿತಿ ಇದ್ದರೆ ನಮಗೆ ತಿಳಿಸಿ. ಕಾನೂನು ಚೌಟ್ಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಷೇರ್ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವಂದತಿಗಳನ್ನು ಹರಡಬೇಡಿ’ -ಅಕ್ಷಯ್ ಹಾಕೇ ಮಚ್ಚೀಂದ್ರ, ಎಸ್ಪಿ ಉಡುಪಿ
ಉಡುಪಿ, ಜು.25: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ತಪ್ಪು ಸಂದೇಶಗಳು ಹರಿದಾಡುತ್ತಿವೆ. ಇಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇಟ್ಟಿರುವುದು, ವಿಡಿಯೋವನ್ನು ಹಂಚಿ ಬ್ಲಾಕ್ಮೇಲ್ ಮಾಡಿ ತೊಂದರೆ ಕೊಟ್ಟಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಆಡಳಿತ ಮಂಡಳಿ ಮೂಲಕ ನಮಗೆ ಹಸ್ತಾಂತರ ಮಾಡಲಾಗಿದೆ. ಅದನ್ನು ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿಯೂ ಯಾವುದೇ ವಿಡಿಯೋ ಸಿಕ್ಕಿಲ್ಲ ಎಂದರು. ನಮ್ಮ ಇಲಾಖೆಯಿಂದಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ಇಟ್ಟಿದ್ದು, ಅಲ್ಲಿಯೂ ನಮಗೆ ಈ ಸಂಬಂಧ ಯಾವುದೇ ವಿಡಿಯೋ ವೈರಲ್ ಆಗಿರುವುದು ಕಂಡುಬಂದಿಲ್ಲ. ಬೇರೆ ಕಡೆ ಬೇರೆ ಯಾವುದೋ ಸನ್ನಿವೇಶಗಳಲ್ಲಿ ತೆಗೆದ ವಿಡಿಯೋಗಳನ್ನು ಇದಕ್ಕೆ ಲಿಂಕ್ ಮಾಡಲಾಗುತ್ತಿದೆ. ಈ ವಿಡಿಯೋಗಳಿಗೂ ಕಾಲೇಜಿನ ಘಟನೆಗೂ ಯಾವುದೇ ಸಂಬಂಧ ಇಲ್ಲ. ಬೇರೆ ಕಡೆ ಮಾಡಿರುವ ವಿಡಿಯೋಗೆ ವಾಯ್ಸ್ ಎಡಿಟ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ಅಥವಾ ಕಾಲೇಜಿನ ಆಡಳಿತ ಮಂಡಳಿಯವರು ಪೊಲೀಸ್ ದೂರು ಕೊಟ್ಟಿಲ್ಲ. ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕೊಳ್ಳಲು ನಮಗೆ ಯಾವುದೇ ವಿಡಿಯೋ ಕೂಡ ಸಿಕ್ಕಿಲ್ಲ. ಕೆಲವು ಸಂದರ್ಭದಲ್ಲಿ ಸಮಾಜದ ಹಿತಾಸಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಯಾರಿಗಾದರೂ ವಿಡಿಯೋ ಸಿಕ್ಕಿದರೆ ನಮಗೆ ಕೊಡಿ, ನಾವು ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಈಗಾಗಲೇ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಕಾಲೇಜಿನ ನಿಯಮ ಪ್ರಕಾರ ಆ ಪ್ರಕರಣವನ್ನು ನಿಭಾಯಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ತನ್ನ ತಾಯಿ ಸಮಕ್ಷಮದಲ್ಲಿ ಲಿಖಿತವಾಗಿ ‘ನಾವೆಲ್ಲ ಒಟ್ಟಿಗೆ ಇರುವುದು, ಅವರು ಫನ್ಗಾಗಿ ಈ ರೀತಿ ವಿಡಿಯೋ ಮಾಡಿದ್ದಾರೆ. ನಂತರ ನನಗೆ ತೋರಿಸಿದ ಕೂಡಲೇ ಡಿಲೀಟ್ ಮಾಡಿದ್ದಾರೆ’ ಎಂದು ಆಡಳಿತ ಮಂಡಳಿಗೆ ಬರೆದುಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ರಶ್ಮಿ ಸಾವಂತ್ ಗೆ ಪೊಲೀಸರು ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಟ್ವೀಟ್ ಫೇಕ್ ಖಾತೆಯಿಂದ ಮಾಡಲಾಗಿದೆ ಎಂಬುದಾಗಿ ತಿಳಿಯಬೇಕಿತ್ತು. ಈ ಟ್ವೀಟ್ನಲ್ಲಿ ಬರೆದ ವಿಷಯ ಸತ್ಯಕ್ಕೆ ದೂರವಾಗಿದೆ ಎಂಬುದನ್ನು ತಿಳಿಸುವ ಉದ್ದೇಶಕ್ಕಾಗಿ ಅವರನ್ನು ಪೊಲೀಸರು ಸಂಪರ್ಕ ಮಾಡಿದ್ದಾರೆ. ಅದು ಬಿಟ್ಟು ಅವರಿಗೆ ತೊಂದರೆ ಕೊಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಸಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ ಉಪಸ್ಥಿತರಿದ್ದರು.