ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ವಿವಾದ; ಮಹಿಳಾ ರಾಷ್ಟ್ರೀಯ ಆಯೋಗ ತಂಡ ಉಡುಪಿಗೆ: ಶ್ಯಾಮಲಾ ಕುಂದರ್
ಉಡುಪಿ, ಜು.26: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಆಯೋಗದ ದಕ್ಷಿಣ ಭಾರತ ಪ್ರತಿನಿಧಿ ಖುಷ್ಬು ಸುಂದರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಒಬ್ಬಳು ಮಹಿಳೆಯಾಗಿ ಮಹಿಳೆಯರ ಪರ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ಅದಕ್ಕಾಗಿ ಈ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಟ್ವೀಟ್ ಮಾಡಿ ಈ ಪ್ರಕರಣವನ್ನು ನಾವು ಕೈಗೆತ್ತಿಕೊಂಡಿದ್ದೇವೆ ಎಂದಿದ್ದಾರೆ ಎಂದು ತಿಳಿಸಿದರು.
ಯಾವುದೇ ಪ್ರಚಾರ ಮಾಡದೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗದಂತೆ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಆಯೋಗಕ್ಕೆ ತಿಳಿಸಿದ್ದೇನೆ. ಈ ನಿಟ್ಟಿನಲ್ಲಿ ಆಯೋಗ ಕಾರ್ಯಪ್ರವೃತ್ತವಾಗಿದೆ. ಮೂವರು ವಿದ್ಯಾರ್ಥಿನಿಯರು ವಿಡಿಯೋ ಮಾಡಿ ರವಾನೆ ಮಾಡಿದ್ದರೆ ಅಥವಾ ಡಿಲೀಟ್ ಮಾಡಿದ್ದರೆ ಆಯೋಗದ ತನಿಖೆಯಿಂದ ಬಯಲಾಗುತ್ತದೆ. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಹೆಣ್ಣು ಮಕ್ಕಳು ಇಂತಹ ಕೃತ್ಯಕ್ಕೆ ಇಳಿಯುವ ಮೊದಲು ಆಕೆ ಕೂಡ ಹೆಣ್ಣು ಮಗಳು ಎಂಬ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಪೊಲೀಸರು ದೂರು ಬರುವವರೆಗೆ ಕಾಯದೆ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಈ ಮೂಲಕ ಇಲಾಖೆ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ಕಾರ್ಯ ಮಾಡಬೇಕು. ಈ ವಿಚಾರದಲ್ಲಿ ರಾಜ್ಯ ಸರಕಾರ ವೌನ ವಹಿಸಿರುವುದು ಸರಿಯಲ್ಲ. ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಸರಕಾರ ಹಾಗೂ ಉಸ್ತುವಾರಿ ಸಚಿವರು ಕೂಡ ಮಾತ ನಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ನ ಜಿಲ್ಲಾ ಸಮಿತಿ ಸದಸ್ಯೆ ತಾರಾ ಉಮೇಶ್ ಆಚಾರ್ಯ, ಕೊಲ್ಲೂರು ದೇವಳದ ಆಡಳಿತ ಮಂಡಳಿ ಸದಸ್ಯೆ ಸಂಧ್ಯಾ ರಮೇಶ್, ನ್ಯಾಯವಾದಿ ಸಹನಾ ಕುಂದರ್ ಉಪಸ್ಥಿತರಿದ್ದರು.
‘ಈ ಪ್ರಕರಣದಲ್ಲಿ ರಾಜಕೀಯ ಶೋಭೆ ತರಲ್ಲ’
ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಈ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡಿ ಹೋರಾಟ ಮಾಡುವಂತಹ ಅನಿವಾರ್ಯತೆ ಯಾರಿಗೂ ಬರಬಾರದು. ಮಹಿಳೆಯರ ವಿಚಾರ ತೆಗೆದುಕೊಂಡು ರಾಜಕೀಯ ಮಾಡುವುದು ಅಂತಹ ರಾಜಕೀಯ ಯಾವುದೇ ಪಕ್ಷಕ್ಕೂ ಶೋಭೆ ಅಲ್ಲ ಎಂದು ಶ್ಯಾಮಲಾ ಕುಂದರ್ ತಿಳಿಸಿದರು. ನಾನು ರಾಜಕೀಯ ಅಥವಾ ಧಾರ್ಮಿಕವಾಗಿ ಈ ವಿಚಾರ ವನ್ನು ಮಾತನಾಡುತಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹೆಣ್ಣಿಗೆ ಆಗಿರುವ ಅನ್ಯಾಯ ಬಗ್ಗೆ ಮಾತನಾಡುತ್ತಿದ್ದೇನೆ. ಸಂತ್ರಸ್ತೆ ದೂರು ಕೊಡಲವು ಮುಂದೆ ಬರುವುದಿಲ್ಲ ಹೇಳಿದ್ದಾಳೆ. ಎಲ್ಲಿಯೂ ಆಕೆಯ ಹೆಸರನ್ನು ಪ್ರಸ್ತಾಪ ಮಾಡದೆ ಸೂಕ್ಷ್ಮ ವಿಚಾರದ ನೆಲೆಯಲ್ಲಿ ಈ ಪ್ರಕರಣವನ್ನು ಜನತೆ ನೋಡಬೇಕು. ಈ ಬಗ್ಗೆ ಯಾರು ಕೂಡ ಯಾವುದೇ ವೇದಿಕೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚಾರ ಮಾಡುವ ಬದಲು ಸತ್ಯಾಂಶ ಏನು ಎಂಬುದನ್ನು ತಿಳಿದುಕೊಳ್ಳಬೇಕು.