ರಸ್ತೆಯ ಮೇಲೆ ಹೊಳೆಯಂತೆ ಹರಿದ ವೈನ್: ಅಚ್ಚರಿಗೊಂಡ ನಾಗರಿಕರು
ಲಿಸ್ಬನ್: ಪೋರ್ಚುಗಲ್‌ನ ಸಾವೋ ಲೊರೆನ್ಸಕೊ ಡೆ ಬೈರೊ ಎಂಬ ಪುಟ್ಟ ನಗರದ ನಿವಾಸಿಗಳಿಗೆ ಕಳೆದ ರವಿವಾರ ಅಚ್ಚರಿ ಕಾದಿತ್ತು. ಅಲ್ಲಿನ ರಸ್ತೆಗಳ ತುಂಬೆಲ್ಲಾ ಕೆಂಪು ವೈನ್ ನದಿಯೇ ಹರಿಯುತ್ತಿತ್ತು.
ಏನಿದು ಕೌತುಕವೆಂದು ಅಲ್ಲಿನ ನಿವಾಸಿಗಳು ಲಕ್ಷಾಂತರ ಲೀಟರ್ ವೈನ್ ಅಲ್ಲಿನ ಕಡಿದಾದ ಗುಡ್ಡದಿಂದ ಕೆಳಗೆ ನಗರದ ರಸ್ತೆಗಳಿಗೆ ಹರಿದು ಬರುತ್ತಿರುವುದನ್ನು ವಿಸ್ಮಯದಿಂದ ನೋಡಿದರು.
ಅಷ್ಟಕ್ಕೂ ಈ ಕೌತುಕದ ಹಿಂದೆ ಒಂದು ಕಾರಣವಿದೆ. ಆ ಪಟ್ಟಣದ ಡಿಸ್ಟಿಲ್ಲರಿಯಲ್ಲಿ 20 ಲಕ್ಷ ಲೀಟರಿಗೂ ಅಧಿಕ ಕೆಂಪು ವೈನ್ ಹೊಂದಿದ್ದ ಬ್ಯಾರೆಲ್‌ಗಳಿದ್ದ ಟ್ಯಾಂಕ್ ಒಂದು ಅಚಾನಕ್ಕಾಗಿ ಸ್ಫೋಟಗೊಂಡ ಪರಿಣಾಮ ಈ ಕೆಂಪು ವೈನ್ ರಸ್ತೆ ತುಂಬೆಲ್ಲಾ ಹರಿದಿದೆ. ಎಷ್ಟು ಹರಿದಿದೆಯೆಂದರೆ ಒಂದು ಒಲಿಂಪಿಕ್ ಗಾತ್ರದ ಈಜುಕೊಳದಲ್ಲಿನ ನೀರಿನಷ್ಟು. ಆದರೆ ಈ ವೈನ್ ಹತ್ತಿರದ ನದಿಯತ್ತ ಸಾಗಿದಾಗ ಪರಿಸರ ಸಮಸ್ಯೆಗಳ ಆತಂಕ ಎದುರಾಯಿತು. ಡಿಸ್ಟಿಲ್ಲರಿ ಪಕ್ಕದ ಮನೆಯೊಂದರ ತಳಅಂತಸ್ತು ತುಂಬಾ ವೈನ್ ಕೃತಕ ನೆರೆ ಸೃಷ್ಟಿಯಾಗಿತ್ತು.
ಪಟ್ಟಣದ ಪಕ್ಕದ ಸೆರ್ಟಿಮಾ ನದಿಗೆ ಈ ವೈನ್ ಸೇರುವ ಮುನ್ನ ಎಚ್ಚೆತ್ತುಕೊಂಡ ಅಲ್ಲಿನ ಅಗ್ನಿಶಾಮಕ ದಳ, ಈ ವೈನ್ ಹತ್ತಿರದ ಗದ್ದೆಯೊಂದಕ್ಕೆ ಹರಿಯುವಂತೆ ಮಾಡಿದೆ.
ಈ ಘಟನೆಗೆ ಕಾರಣವಾದ ಲೆವಿರಾ ಡಿಸ್ಟಿಲ್ಲರಿ ನಗರವಾಸಿಗಳಿಂದ ಕ್ಷಮೆಕೋರಿದೆಯಲ್ಲದೆ ಪಟ್ಟಣದ ರಸ್ತೆ ತುಂಬಾ ಹರಿದ ವೈನ್ ಅನ್ನು ಡ್ರೆಡ್ಜ್ ಮಾಡಿ ತೆರವುಗೊಳಿಸುವುದಾಗಿ ಹೇಳಿದೆ.
ಅನಾನುಕೂಲ ಉಂಟಾದವರೆಲ್ಲರಿಗೂ ಯಾವುದೇ ದುರಸ್ತಿ ಕೆಲಸ ನಡೆಸಲಿದ್ದರೆ ಅದಕ್ಕಾಗಿ ತಗಲುವ ಎಲ್ಲಾ ವೆಚ್ಚವನ್ನು ಭರಿಸುವುದಾಗಿಯೂ ಡಿಸ್ಟಿಲ್ಲರಿ ಹೇಳಿದೆ.