ಒಂದು ರಾಷ್ಟ್ರ ಒಂದು ಚುನಾವಣೆ ವಿಧೇಯಕ ಮಂಡನೆ ಮುಂದೂಡಿಕೆ
ಹೊಸದಿಲ್ಲಿ: ಲೋಕಸಭೆಯಲ್ಲಿ ‘ ಒಂದು ರಾಷ್ಟ್ರ ಒಂದು ಚುನಾವಣೆ’ಗೆ ಸಂಬಂಧಿಸಿದ ವಿಧೇಯಕಗಳ ಮಂಡನೆಯನ್ನು ಕೇಂದ್ರ ಸರಕಾರವು ಮುಂದಿನ ವಿತ್ತೀಯ ಕಲಾಪಗಳು ಪೂರ್ತಿಯಾಗುವವರೆಗೆ ಮುಂದೂಡಿದೆಯೆಂದು ಮೂಲಗಳು ತಿಳಿಸಿವೆ.
ಸಂವಿಧಾನದ 129ನೇ ತಿದ್ದುಪಡಿ ವಿಧೇಯಕ ಹಾಗೂ ಕೇಂದ್ರಾಡಳಿತ ಕಾನೂನುಗಳು (ತಿದ್ದುಪಡಿ ) ವಿಧೇಯಕವನ್ನು ಸೋಮವಾರ ಲೋಕಸಭೆಯಲ್ಲಿ ಮಂಡನೆಗೆ ಪಟ್ಟಿ ಮಾಡಲಾಗಿದೆ.
ಅನುದಾನಗಳ ಪೂರಕ ಬೇಡಿಕೆಗಳ ಮೊದಲ ಕಂತನ್ನು ಸದನವು ಮಂಡನೆಗೆ ಪಟ್ಟಿ ಮಾಡಿದ್ದು, ಅದು ಅಂಗೀಕಾರಗೊಂಡ ಬಳಿಕ ಈ ವಾರದ ಅಂತ್ಯದಲ್ಲಿ ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದ ಎರಡು ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆಯಿದೆಯೆಂದು ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಲೋಕಸಭಾ ಕಾರ್ಯಾಲಯವು ಬಿಡುಗಡೆಗೊಳಿಸಿರುವ ಸದನ ವ್ಯವಹಾರಗಳ ಪರಿಷ್ಕೃತ ಪಟ್ಟಿಯಲ್ಲಿ ಸೋಮವಾರದ ಕಾರ್ಯಸೂಚಿಯಲ್ಲಿ ಈ ಎರಡು ವಿಧೇಯಕಗಳನ್ನು ಹೆಸರಿಸಲಾಗಿಲ್ಲವೆಂದು ತಿಳಿದುಬಂದಿದೆ.
ಆದಾಗ್ಯೂ, ಲೋಕಸಭಾ ಸ್ಪೀಕರ್ ಅವರ ಅನುಮತಿಯೊಂದಿಗೆ ಕಲಾಪಗಳ ಪೂರಕ ಪಟ್ಟಿಯ ಮೂಲಕ ಕೊನೆ ಗಳಿಗೆಯಲ್ಲಿ ವಿಧೇಯಕವನ್ನು ಮಂಡಿಸಲು ಅವಕಾಶವಿದೆಯೆಂದು ಮೂಲಗಳು ತಿಳಿಸಿವೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳನ್ನು ಸದನದ ನಿಯಮಾವಳಿಗಳ ಪ್ರಕಾರ ಸದಸ್ಯರ ನಡುವೆ ಹಂಚಲಾಗುವುದು. ಸಂಸತ್‌ನ ಚಳಿಗಾಲದ ಅಧಿವೇಶನವು ಡಿಸೆಂಬರ್ 20ರಂದು ಸಮಾರೋಪಗೊಳ್ಳಲಿದೆ.