ಪ್ರಧಾನಿ ಮೋದಿ ಉದ್ಘಾಟಿಸಿದ ಕೆಲದಿನಗಳಲ್ಲೇ ವಿಮಾನ ನಿಲ್ದಾಣದ ಛಾವಣಿ ಕುಸಿತ; ವಿಡಿಯೋ ವೈರಲ್

Update: 2023-07-24 11:07 GMT

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್‌ನಲ್ಲಿರುವ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನೂತನ ಸಮಗ್ರ ಟರ್ಮಿನಲ್ ಕಟ್ಟಡ(NITB)ದ ಕೆಲವು ಚಾವಣಿಯು ಕುಸಿದು ಬೀಳುತ್ತಿರುವ ದೃಶ್ಯಾವಳಿಗಳು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಪ್ರಧಾನಿ ಮೋದಿ ನೂತನ ಸಮಗ್ರ ಟರ್ಮಿನಲ್ ಗಳನ್ನು ಉದ್ಘಾಟಿಸಿದ್ದರು.

ಈ ವಾರದ ಆರಂಭದಲ್ಲಿ ಆಯೋಜನೆಗೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಅಧಿಕಾರಿಗಳೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಹಾಗೂ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಕೂಡಾ ಪಾಲ್ಗೊಂಡಿದ್ದರು.

ಕಟ್ಟಡದ ಚಾವಣಿಯೊಂದು ಕುಸಿದು ಬೀಳುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದ ನಂತರ, ಉದ್ಘಾಟನೆಗೊಂಡ ಕೇವಲ ಒಂದು ವಾರದ ಅಂತರದಲ್ಲಿ ಇಂತಹ ಕುಸಿತವಾಗುತ್ತಿರುವುದರಿಂದ ಕಟ್ಟಣ ನಿರ್ಮಾಣ ಕಾಮಗಾರಿಯ ಗುಣಮಟ್ಟದ ಕುರಿತು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ.

ಕುಸಿತವಾಗಿರುವ ಕಟ್ಟಡದ ಪಾರ್ಶ್ವಗಳ ದೃಶ್ಯಗಳು ಹಾಗೂ ವಿಡಿಯೊ ವೈರಲ್ ಆದ ನಂತರ, ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಉದ್ಘಾಟಿಸುವ ಯಾವುದೇ ಹೆದ್ದಾರಿ, ವಿಮಾನ ನಿಲ್ದಾಣಗಳು, ಸೇತುವೆಗಳು, ರೈಲುಗಳು ಇತ್ಯಾದಿ ಅಪೂರ್ಣ ಕಾಮಗಾರಿಗಳು ಅಥವಾ ಕಳಪೆ ಮೂಲಸೌಕರ್ಯಗಳಿಗೆ ಸಚಿವರು ತಮ್ಮ ಸಮ್ಮತಿ ಸೂಚಿಸುವುದಕ್ಕಿಂತ, ಅವರೊಂದಿಗಿನ ವಿಧೇಯತೆಯ ಸೂಚ್ಯಂಕವನ್ನು ಉತ್ತೇಜಿಸಿಕೊಳ್ಳಲೇ ಕಾತುರರಾಗಿದ್ದಾರೆ. ಅದರ ಬೆಲೆಯನ್ನು ತೆರುವವರು ಮಾತ್ರ ತೆರಿಗೆದಾರರು ಹಾಗೂ ನಾಗರಿಕರು. " ಹೊಸ ಭಾರತ"ದಲ್ಲಿ ಇಂತಹ ವಿಷಾದಕರ ವ್ಯವಹಾರ ನಡೆಯುತ್ತಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಜುಲೈ 18, ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಮಗ್ರ ಟರ್ಮಿನಲ್ ಕಟ್ಟಡ(NITB)ವನ್ನು ಉದ್ಘಾಟಿಸಿದ್ದರು. ಉದ್ಘಾಟನೆಗೂ ಮುನ್ನ ಟ್ವೀಟ್ ಮಾಡಿದ್ದ ಅವರು, "ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನೂತನ ಸಮಗ್ರ ಟರ್ಮಿನಲ್ ಕಟ್ಟಡವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸುಲಭ ಪ್ರಯಾಣ ಬೆಳೆಸುವುದನ್ನು ಖಾತ್ರಿಪಡಿಸಲಿದೆ. ನಿರ್ದಿಷ್ಟವಾಗಿ ಇದು ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲಿದೆ. ಈ ಕಟ್ಟಡವು ನಾಳೆ, ಜುಲೈ 18ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ" ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News