ಅಮೆರಿಕಾದ ಪೆಂಟಗನ್ ಕಚೇರಿ ಕಟ್ಟಡವನ್ನೂ ಹಿಂದಿಕ್ಕಿದ ಭಾರತದ ಈ ಕಟ್ಟಡ !
ಹೊಸದಿಲ್ಲಿ: ವಿಶ್ವದ ಶೇ. 90ರಷ್ಟು ವಜ್ರ ವ್ಯಾಪಾರವನ್ನು ಹೊಂದಿರುವ ಸೂರತ್ ನಗರವು, ಕತ್ತರಿಸುವವರು, ನುಣುಪು ಮಾಡುವವರು ಹಾಗೂ ವ್ಯಾಪಾರಿಗಳು ಸೇರಿದಂತೆ 65,000ಕ್ಕೂ ಹೆಚ್ಚು ಮಂದಿ ವಜ್ರ ವೃತ್ತಿಪರರಿಗಾಗಿ ನಿರ್ಮಿಸಿರುವ ವಿಸ್ತಾರವಾದ ಸೂರತ್ ವಜ್ರ ವ್ಯಾಪಾರ ಕಟ್ಟೆಯ ಉದ್ಘಾಟನೆಗೆ ಸಾಕ್ಷಿಯಾಗಿದೆ. ಆ ಮೂಲಕ ತನ್ನ ಪ್ರತಿಷ್ಠಿತ ಉದ್ಯಮಕ್ಕೆ ಸ್ಥಳಾವಕಾಶ ಒದಗಿಸಲು ಅಪೂರ್ವ ಕಟ್ಟಡವನ್ನು ಕೊಡುಗೆ ನೀಡಿದೆ ಎಂದು indiatoday.in ವರದಿ ಮಾಡಿದೆ.
7.1 ದಶಲಕ್ಷ ಚದರ ಅಡಿ ವಿಸ್ತೀರ್ಣಕ್ಕೂ ಹೆಚ್ಚು ಫ್ಲೋರ್ ಸ್ಪೇಸ್ ಹೊಂದಿರುವ ಈ ಕಟ್ಟಡವು, ವಿಶ್ವದ ಅತ್ಯಂತ ಬೃಹತ್ ಕಚೇರಿ ಕಟ್ಟಡ ಎಂಬ ಹಿರಿಮೆಗೆ ಪಾತ್ರವಾಗಿರುವ ಅಮೆರಿಕಾದ ಪೆಂಟಗನ್ ಕಚೇರಿಯ ಕಟ್ಟಡವನ್ನೂ ಹಿಂದಿಕ್ಕಿದೆ ಎಂದು ಭಾವಿಸಲಾಗಿದೆ. CNN ಸುದ್ದಿ ಸಂಸ್ಥೆಯ ವರದಿ ಪ್ರಕಾರ, 35 ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ 15 ಅಂತಸ್ತಿನ ಈ ಆಕರ್ಷಕ ವ್ಯಾಪಾರ ಕಟ್ಟಡ, ಕೇಂದ್ರ ಕಂಬದಿಂದ ಪರಸ್ಪರ ಸಂಪರ್ಕ ಹೊಂದಿರುವ ಚೌಕಾಕಾರದ ಒಂಬತ್ತು ಕಟ್ಟಡಗಳ ವಿಶಿಷ್ಟ ವಿನ್ಯಾಸ ಹೊಂದಿದೆ ಎಂದು ಹೇಳಲಾಗಿದೆ.
ಕೋವಿಡ್ ಸಂಬಂಧಿ ವಿಳಂಬದಿಂದಾಗಿ ನಿರ್ಮಾಣ ಕಾಮಗಾರಿಗೆ ಕೊಂಚ ಅಡಚಣೆಯುಂಟಾಗಿದ್ದರಿಂದ, ನಾಲ್ಕು ವರ್ಷಗಳ ನಂತರ ಈ ವ್ಯಾಪಾರ ಮಾರುಕಟ್ಟೆ ನವೆಂಬರ್ ತಿಂಗಳಲ್ಲಿ ತನ್ನ ಮೊದಲ ಭೋಗ್ಯದಾರನನ್ನು ಸ್ವಾಗತಿಸಲು ಸಿದ್ಧವಾಗಿದೆ. ಈ ಕಟ್ಟಡದ ಅಧಿಕೃತ ಉದ್ಘಾಟನೆ ಈ ವರ್ಷದ ಅಂತ್ಯದಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಇದು 4,700ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಇವು ಸಣ್ಣ ವಜ್ರಗಳ ಕತ್ತರಿಸುವಿಕೆ ಹಾಗೂ ನುಣುಪುಗೊಳಿಸುವಿಕೆ ಕಾರ್ಯಾಗಾರಗಳಾಗಿಯೂ ಕಾರ್ಯನಿರ್ವಹಿಸಲಿವೆ. ಈ ವಾಣಿಜ್ಯ ಸಂಕೀರ್ಣವು 131 ಎಲಿವೇಟರ್‌ಗಳನ್ನೂ ಹೊಂದಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗಾಗಿ ಭೋಜನಾಲಯ, ಚಿಲ್ಲರೆ ಅಂಗಡಿ, ವಿಶ್ರಾಂತಿ ಕೊಠಡಿ ಹಾಗೂ ಸಮ್ಮೇಳನ ಸಭಾಂಗಣವನ್ನೂ ಹೊಂದಿದೆ.
ಈ ಅಪೂರ್ವ ಕಟ್ಟಡವನ್ನು ಶ್ಲಾಘಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಸೂರತ್ ವಜ್ರ ಮಾರುಕಟ್ಟೆಯು ಸೂರತ್ ವಜ್ರೋದ್ಯಮದ ಚಲನಶೀಲತೆ ಹಾಗೂ ಪ್ರಗತಿಯನ್ನು ಅನಾವರಣ ಮಾಡಿದೆ. ಇದು ಭಾರತೀಯರ ಉದ್ಯಮಶೀಲ ಸ್ಫೂರ್ತಿಗೆ ಸಾಕ್ಷಿ ಕೂಡಾ. ವ್ಯಾಪಾರ, ನವೋನ್ವೇಷಣೆ ಹಾಗೂ ಸಹಭಾಗಿತ್ವಕ್ಕೆ ಇದು ಕೇಂದ್ರ ಸ್ಥಾನವಾಗಿ ಕೆಲಸ ಮಾಡಲಿದ್ದು, ನಮ್ಮ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಮತ್ತು ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಸೂರತ್ ವಜ್ರ ಮಾರುಕಟ್ಟೆಯಿಂದ ಆಗುವ ಲಾಭಗಳ ಕುರಿತು ಬೆಳಕು ಚೆಲ್ಲಿರುವ ಈ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಗಢಾವಿ, ವ್ಯಾಪಾರೋದ್ದೇಶಕ್ಕಾಗಿ ಸಾವಿರಾರು ಮಂದಿ ನಿತ್ಯ ಮುಂಬೈಗೆ ಪ್ರಯಾಣಿಸುವುದನ್ನು ಹೇಗೆ ತಡೆಯುತ್ತದೆ ಎಂದು ವಿವರಿಸಿದ್ದಾರೆ. ವಜ್ರ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಇದು ಉತ್ತಮ ಆಯ್ಕೆ ಎಂದು ಅವರು ಬಣ್ಣಿಸಿದ್ದಾರೆ.
ಅಂತಾರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವ ಭಾರತೀಯ ಮೂಲದ ವಾಸ್ತುವಿನ್ಯಾಸ ಸಂಸ್ಥೆಯಾದ ಮಾರ್ಫೊಜೆನಿಸಿಸ್, ಸೂರತ್ ವಜ್ರ ವ್ಯಾಪಾರ ಕಟ್ಟೆ ನಿರ್ಮಾಣ ಕಾಮಗಾರಿಯ ಹಿಂದಿನ ರೂವಾರಿಯಾಗಿದೆ. ಬೇಡಿಕೆಯನ್ನು ಆಧರಿಸಿ ಈ ಯೋಜನೆಯ ವಿಸ್ತೀರ್ಣವನ್ನು ನಿರ್ಣಯಿಸಲಾಗಿದ್ದು, ನಿರ್ಮಾಣ ಕಾಮಗಾರಿ ಪ್ರಾರಂಭವಾಗುವ ಮುನ್ನವೇ ಈ ಸಂಕೀರ್ಣದ ಎಲ್ಲ ಕಚೇರಿಗಳನ್ನು ವಜ್ರ ತಯಾರಿಕಾ ಕಂಪನಿಗಳು ಈಗಾಗಲೇ ಖರೀದಿಸಿವೆ.