ರಾಹುಲ್ ಗೆ ವಿವಾಹ ಮಾಡಿ ಎಂದ ರೈತ ಮಹಿಳೆಗೆ ಸೋನಿಯಾ ಗಾಂಧಿ ಹೇಳಿದ್ದೇನು?

Update: 2023-07-29 10:28 GMT

ಹೊಸದಿಲ್ಲಿ: ಸಾರ್ವಜನಿಕರನ್ನು ತಲುಪಲು ಹರಿಯಾಣದ ಸೋನಿಪತ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿರುವ ವಿಡಿಯೊ ವೈರಲ್ ಆಗಿದೆ. ಈ ಮುಕ್ತ ಸಂವಾದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ತನ್ನ ತಾಯಿ ಸೋನಿಯಾ ಗಾಂಧಿ ಜೊತೆಗೂಡಿ ರೈತ ಮಹಿಳೆಯರೊಂದಿಗೆ ಒಂದಷ್ಟು ಮೋಜಿನ ಕ್ಷಣಗಳನ್ನು ಕಳೆದಿದ್ದಾರೆ.

ರೈತ ಮಹಿಳೆಯರೊಂದಿಗಿನ ಈ ಲಘು ಧಾಟಿಯ ಸಂಭಾಷಣೆಯ ವಿಡಿಯೊವನ್ನು ರಾಹುಲ್ ಗಾಂಧಿ ತಮ್ಮ  ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದು, ಅದರಲ್ಲಿ ಓರ್ವ ರೈತ ಮಹಿಳೆ, "ರಾಹುಲ್ ಗಾಂಧಿಗೆ ಮದುವೆ ಮಾಡಿ" ಎಂದು ಹೇಳಿದ್ದು, ಅದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ, "ನೀವೇ ಓರ್ವ ಯುವತಿಯನ್ನು ಹುಡುಕಿ" ಎಂದು ಉತ್ತರಿಸಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ, "ಇದಾಗಬಹುದು" ಎಂದು ಸೋನಿಯಾ ಗಾಂಧಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ರೈತರ ಹೊಲಗಳಿಗೆ ಭೇಟಿ ನೀಡಿದ್ದಾಗ ಅವರಿಗೆ ನೀಡಿದ್ದ ಭರವಸೆಯಂತೆ ಸೋನಿಯಾ ಗಾಂಧಿ ಅವರು ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನ ಕೂಟ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಆ ರೈತ ಮಹಿಳೆಯರು ಗಾಂಧಿ ಕುಟುಂಬದೊಂದಿಗೆ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಭರವಸೆಯನ್ನು ಈಡೇರಿಸಿರುವ ರಾಹುಲ್ ಗಾಂಧಿ, ಹರಿಯಾಣದ ಸೋನಿಪತ್ ಜಿಲ್ಲೆಯಿಂದ ಕೆಲವು ರೈತ ಮಹಿಳೆಯರನ್ನು ತಮ್ಮ ತಾಯಿಯ ನಿವಾಸಕ್ಕೆ ಆಹ್ವಾನಿಸಿದ್ದಾರೆ.

ಈ ಸಂವಾದಲ್ಲಿ ಆಹಾರ, ಮಹಿಳಾ ಸಬಲೀಕರಣ ಹಾಗೂ ಜಿಎಸ್‌ಟಿ ವಿಚಾರಗಳು ಮುಖ್ಯವಾಗಿ ಚರ್ಚೆಗೊಂಡವು. ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ನಿವಾಸಕ್ಕೆ ಮಹಿಳಾ ರೈತರನ್ನು ಭೋಜನ ಕೂಟಕ್ಕೆ ಆಹ್ವಾನಿಸಿದ್ದ ರಾಹುಲ್ ಗಾಂಧಿ, ನನ್ನ ಮನೆಯನ್ನು ಸರ್ಕಾರ ವಾಪಸು ಪಡೆದಿದೆ ಎಂದು ಅವರಿಗೆ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ವಿಶೇಷ ಅತಿಥಿಗಳೊಂದಿಗೆ ಕಳೆದ ಈ ದಿನ ನನ್ನ ತಾಯಿ, ಪ್ರಿಯಾಂಕಾ ಹಾಗೂ ನನಗೆ ಸ್ಮರಣೀಯವಾಗಿದೆ. ಸೊನಿಪತ್ ರೈತ ಸಹೋದರಿಯರ ದಿಲ್ಲಿ ದರ್ಶನ, ಅವರೊಂದಿಗೆ ಮನೆಯಲ್ಲಿ ನಡೆದ ಭೋಜನ ಕೂಟ ಹಾಗೂ ಹಲವಾರು ಮೋಜಿನ ಕ್ಷಣಗಳು ಈ ಭೇಟಿಯ ಸಂದರ್ಭದಲ್ಲಿದ್ದವು. ಇದರೊಂದಿಗೆ ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲೇ ತಯಾರಿಸಿದ ಉಪ್ಪಿನ ಕಾಯಿ ಹಾಗೂ ಅಪರಿಮಿತ ಪ್ರೀತಿಯಂತಹ ಬೆಲೆ ಕಟ್ಟಲಾಗದ ಉಡುಗೊರೆಗಳನ್ನು ಒಟ್ಟಾಗಿ ಪಡೆದೆವು" ಎಂದು ಹೇಳಿಕೊಂಡಿದ್ದಾರೆ.

ಆ ವಿಡಿಯೊದಲ್ಲಿ ಗಾಂಧಿ ಕುಟುಂಬದ ಸದಸ್ಯರು ಗ್ರಾಮೀಣ ರೈತ ಮಹಿಳೆಯರೊಂದಿಗೆ ಕಳೆದಿರುವ ಲಘು ಕ್ಷಣಗಳು ಹಾಗೂ ಅವರಿಗೆ ಭೋಜನ ಬಡಿಸುತ್ತಿರುವುದನ್ನು ಕಾಣಬಹುದಾಗಿದೆ. ರಾಹುಲ್ ಗಾಂಧಿ ಆ ರೈತ ಮಹಿಳೆಯರನ್ನು ಕುರಿತು ನಿಮಗೆ ಊಟ ಇಷ್ಟವಾಯಿತೆ, ಎಲ್ಲರೂ ಸಿಹಿಯನ್ನು ಸೇವಿಸಿದಿರೆ ಎಂದು ಪ್ರಶ್ನಿಸುತ್ತಿರುವುದನ್ನು ಆ ವಿಡಿಯೊದಲ್ಲಿ ಕೇಳಬಹುದಾಗಿದೆ. ಅಲ್ಲದೆ, ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಮಕ್ಕಳು ಹಾಗೂ ಬಾಲಕಿಯರಿಗೆ ಚಾಕೊಲೇಟ್ ಹಂಚುತ್ತಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿದೆ.

ದಿಲ್ಲಿ ಭೇಟಿಯಿಂದ ರೋಮಾಂಚಿತರಾಗಿರುವ ಮಹಿಳಾ ರೈತ ಗುಂಪೊಂದರಲ್ಲಿನ ಮಹಿಳೆಯೊಬ್ಬರು "ಚಲೋ ದಿಲ್ಲಿ, ಚಲೋ" ಎಂದು ಸಂತಸದಿಂದ ಹೇಳುತ್ತಿರುವುದು ಆ ವಿಡಿಯೊದಲ್ಲಿ ದಾಖಲಾಗಿದೆ. ಈ ಭೇಟಿಯ ಸಂದರ್ಭದಲ್ಲಿ ಆ ಮಹಿಳೆಯರು ಹಣದುಬ್ಬರ, ಔಷಧಗಳು, ರಸಗೊಬ್ಬರಗಳು, ವಿದ್ಯುಚ್ಛಕ್ತಿಯ ದುಬಾರಿ ಬೆಲೆ ಹಾಗೂ ಜಿಎಸ್‌ಟಿ ಕುರಿತು ಗಾಂಧಿ ಕುಟುಂಬದ ಸದಸ್ಯರ ಬಳಿ ದೂರಿದ್ದಾರೆ.

ಆ ವಿಡಿಯೊದ ಭಾಗವೊಂದರಲ್ಲಿ, "ಮಹಿಳೆಯರು ಯಾರಿಗಿಂತಲೂ ಕಡಿಮೆ ಇಲ್ಲ. ಸಮಾಜ ಮಹಿಳೆಯರನ್ನು ತುಳಿಯುತ್ತಿದೆ. ಮಹಿಳೆಯು ಯಾವುದೇ ಅಂಜಿಕೆ ಇಲ್ಲದೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕು" ಎಂದು ರಾಹುಲ್ ಗಾಂಧಿ ಹೇಳುತ್ತಿರುವುದು ಕಂಡು ಬರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News