ಬೆಳ್ಳಾವಿ ಬಳಿ ಅಂತರ್‌ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ : ಜಿ.ಪರಮೇಶ್ವರ್

Update: 2024-08-15 17:53 GMT

ತುಮಕೂರು: ವಿಶ್ವ ದರ್ಜೆಯ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತುಮಕೂರಿನ ಬೆಳ್ಳಾವಿ ಹೋಬಳಿಯ ಪಿ.ಗೊಲ್ಲಹಳ್ಳಿ ಗ್ರಾಮದಲ್ಲಿ 25 ಎಕರೆ ಹಾಗೂ ಸೋರೆಕುಂಟೆ ಗ್ರಾಮದಲ್ಲಿ 16.33 ಎಕರೆ ಒಟ್ಟು 41.33 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಮೀಸಲಿರಿಸಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಜಿಲ್ಲೆಯಲ್ಲಿ ಮೂಡಿ ಬರಲಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಜನರ ಅನುಕೂಲಕ್ಕಾಗಿ ಮುಂದಿನ ದಿನದಲ್ಲಿ ಬೆಂಗಳೂರಿನಿಂದ ತುಮಕೂರಿನವರೆಗೂ ಮೆಟ್ರೋ ರೈಲು ಸೌಲಭ್ಯವನ್ನು ವಿಸ್ತರಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದ್ದು, ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕೈಗೊಂಡಿದ್ದು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ, 30 ವರ್ಷ ಮೇಲ್ಪಟ್ಟ 5.22 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ತಪಾಸಣೆಯಲ್ಲಿ 25,000 ಮಂದಿಯಲ್ಲಿ ಮಧುಮೇಹ, ರಕ್ತದೊತ್ತಡ, ರಕ್ತಹೀನತೆ, ಇನ್ನಿತರೆ ರೋಗಗಳಿರುವುದು ಕಂಡು ಬಂದಿದ್ದು, ರೋಗಿಗಳ ಮನೆ ಬಾಗಿಲಿಗೆ ಔಷಧಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ.ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಮಹಾನಗರಪಾಲಿಕೆ ಆಯುಕ್ತರಾದ ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News