ಲೋಕಸಭಾ ಚುನಾವಣೆ: ಆಂಧ್ರ ಗಡಿಭಾಗದ ಚೆಕ್‍ಪೋಸ್ಟ್ ಗಳಿಗೆ ಡಿಸಿ, ಎಸ್‍ಪಿ ಭೇಟಿ

Update: 2024-03-28 09:38 GMT

ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಗುರುವಾರ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಕರ್ನಾಟಕ ಆಂಧ್ರದ ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯಿಂದ ಪಾವಗಡ ತಾಲೂಕಿನ ನಾಗಲಾಪುರ ಹಾಗೂ ವೆಂಕಟಮ್ಮನಹಳ್ಳಿ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಎಸ್‍ಎಸ್‍ಟಿ ತಂಡದ ಕಾರ್ಯವನ್ನು ಪರಿಶೀಲಿಸಿದ ಅವರು ಎಲ್ಲ ತಂಡಗಳು 24*7 ಕಾರ್ಯ ನಿರ್ವಹಿಸುವುದರೊಂದಿಗೆ ಕೆಎಸ್‍ಆರ್‍ಟಿಸಿ ಬಸ್ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನೂ ತಪಾಸಣೆಗೊಳಪಡಿಸಬೇಕು. ಪ್ರತಿ ವಾಹನದ ಸಂಖ್ಯೆ, ವಾಹನದ ಮಾದರಿ, ವಾಹನವು ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎಂಬ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಚೆಕ್‍ಪೋಸ್ಟ್‍ಗಳಲ್ಲಿ ನಿರ್ವಹಿಸುತ್ತಿರುವ ವಹಿಗಳನ್ನು ಪರಿಶೀಲಿಸಿದರು.

ಆಂಧ್ರ ಪ್ರದೇಶದ ಗಡಿಯಲ್ಲಿರುವ ಕಂಬದೂರು,ಎಗುವಪಲ್ಲಿ ಚೆಕ್‍ಪೋಸ್ಟ್ ಗಳಿಗೆ ಭೇಟಿ ನೀಡಿ ಸದರಿ ಚೆಕ್‍ಪೋಸ್ಟ್ ಗಳ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸಹ ಗಡಿ ಭಾಗದಲ್ಲಿ ವರದಿಯಾಗಬಹುದಾದ ಲಿಕ್ಕರ್ ಮಾಫಿಯ ಬಗ್ಗೆ ಚರ್ಚಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಾವಗಡ ತಾಲೂಕಿನ ವಿವಿಧ ಚೆಕ್‍ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪ್ರತಿಯೊಂದು ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲು ಎಸ್‍ಎಸ್‍ಟಿ ತಂಡ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಚುನಾವಣಾ ಸಿಬ್ಬಂದಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿದೆ.ಚುನಾವಣಾ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾದ ನಂತರ ಮತದಾರನಿಗೆ ಹಣ,ಮತ್ತಿತರ ವಸ್ತುಗಳ ಆಮಿಷ ಒಡ್ದುವ ಸಾಧ್ಯತೆ ಹೆಚ್ಚಿರುವುದರಿಂದ ಚೆಕ್‍ಪೋಸ್ಟ್‍ಗಳಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.

ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ, ವಿವಿಟಿ ತಂಡ ಹಾಗೂ ಪಿಆರ್ ಓ, ಎಪಿಆರ್ ಓ, ನೋಡಲ್ ಅಧಿಕಾರಿ,ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಎಲ್ಲ ಚುನಾವಣಾ ನಿಯೋಜಿತ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಯಶಸ್ವಿ ಚುನಾವಣೆ ನಡೆಸಲು ಸಾಧ್ಯವೆಂದು ತಿಳಿಸಿದರಲ್ಲದೆ ಮತದಾರರೂ ಸಹ ಏಪ್ರಿಲ್ 26ರಂದು ನಡೆಯುವ ಮತದಾನ ದಿನದಂದು ಯಾವುದೇ ಆಮಿಷಕ್ಕೊಳಗಾಗದೆ ಕಡ್ಡಾಯವಾಗಿ ತಮ್ಮ ಸಮೀಪದ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಅಮೂಲ್ಯ ಮತ ಚಲಾಯಿಸಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು. ಸಾರ್ವಜನಿಕರೂ ಸಹ ಚುನಾವಣಾ ಅಕ್ರಮಗಳು ಕಂಡು ಬಂದರೆ ಕೂಡಲೇ ಸಹಾಯವಾಣಿ ಸಂಖ್ಯೆ 1950 ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಿ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು.ಚುನಾವಣೆ ಅಕ್ರಮಗಳ ಬಗ್ಗೆ ದೂರು ಬಂದ ಕೂಡಲೇ ಎಫ್‍ಎಸ್‍ಟಿ ತಂಡ ಸ್ಥಳಕ್ಕೆ ಧಾವಿಸಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಗಟ್ಟಲು ಆಂಧ್ರ ಗಡಿಭಾಗದ ಶಿರಾ,ಮಧುಗಿರಿ ಹಾಗೂ ಪಾವಗಡ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 12 ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ.ಪಾವಗಡದಲ್ಲಿರುವ ಮತಗಟ್ಟೆಗಳಲ್ಲಿ ವಲ್ನರಬಲ್ ಮತಗಟ್ಟೆಯೆಂದು ಯಾವುದನ್ನೂ ಗುರುತಿಸಿಲ್ಲ. ಈ ಚೆಕ್‍ಪೋಸ್ಟ್ ಗಳು ಗಡಿ ಪ್ರದೇಶದಲ್ಲಿರುವುದರಿಂದ ಪರಿಶೀಲಿಸಲು ಇಂದು ಭೇಟಿ ನೀಡಲಾಗಿದೆ ಎಂದು ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News