ಮತ್ತೊಮ್ಮೆ ಮೂರು ಡಿಸಿಎಂ ವಾದ ಮುಂದಿಟ್ಟ ಸಚಿವ ಕೆ.ಎನ್.ರಾಜಣ್ಣ

Update: 2024-01-04 10:20 GMT

ತುಮಕೂರು, ಜ.4: ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವುದು ಸೂಕ್ತ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮೂವರು ಉಪಮುಖ್ಯಮಂತ್ರಿಗಳನ್ನು ಮಾಡಿದೆ. ಹಾಗೆಯೇ ಕರ್ನಾಟಕದಲ್ಲೂ ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದರೆ ಒಳ್ಳೆಯದು ಎಂದರು.

ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಈ ವಿಷಯವನ್ನು ತರಲಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಬೇಡ ಎಂದು ಹೇಳಿದೆ. ಅದರಂತೆ ಸುಮ್ಮನಿದ್ದೆ. ಈಗ ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ. ಮೂರು ಡಿಸಿಎಂ ಹುದ್ದೆಗಳನ್ನು ಮಾಡಬೇಕು ಎಂದು ಹೇಳಿದರು.

ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿ ಬಗ್ಗೆ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ನಾನೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಮೂರು ಡಿಸಿಎಂಗಳನ್ನು ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಜಾತಿವಾರು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಸರ್ವರಿಗೂ ಸಮಪಾಲು ಸಮಬಾಳು ಅನ್ನೋದು ಕೇವಲ ಸಂಪತ್ತಿಗೆ ಮಾತ್ರ ಅಲ್ಲ. ಅವಕಾಶಗಳಿಗೂ ಕೂಡ ಹಂಚಿಕೆ ಆಗಬೇಕು. ಕಾಂಗ್ರೆಸ್ ಪರ ಯಾವ ಯಾವ ಸಮುದಾಯಗಳು ಇವೆ ಅವರನ್ನು ಡಿಸಿಎಂ ಮಾಡಬೇಕು ಎಂದು ಪುನರುಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News