ತುಮಕೂರು | ಸಾಲ ತೀರಿಸಲು ಬಾಲಕಿಯನ್ನು ಮಾರಾಟ ಮಾಡಿದ ಚಿಕ್ಕಮ್ಮ: ತಾಯಿಯ ಸಮಯಪ್ರಜ್ಞೆಯಿಂದ ಜೀತಮುಕ್ತಿಯಾದ ಬಾಲಕಿ
ತುಮಕೂರು : ಸಾಲ ತೀರಿಸಲಾಗದೆ ಜೀತಕ್ಕಾಗಿ 11 ವರ್ಷದ ಬಾಲಕಿಯನ್ನು ಚಿಕ್ಕಮ್ಮ ಮಾರಾಟ ಮಾಡಿರುವ ಘಟನೆ ಆಂಧ್ರದ ಹಿಂದೂಪುರದಲ್ಲಿ ನಡೆದಿದ್ದು, ತಾಯಿಯ ಸಮಯಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಕೇವಲ 15 ಸಾವಿರ ರೂ. ಸಾಲದ ಬದಲಿಗೆ ತುಮಕೂರು ಮೂಲದ ಬಾಲಕಿಯನ್ನು ಜೀತಕ್ಕಾಗಿ ಚಿಕ್ಕಮ್ಮ ಮಾರಾಟ ಮಾಡಿದ್ದಳು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ಪಡೆದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ತುಮಕೂರು ನಗರದ ದಿಬ್ಬೂರು ನಿವಾಸಿಯಾದ ಚೌಡಮ್ಮ ಎಂಬಾಕೆ ತನ್ನ ಪುತ್ರಿಯನ್ನು, ತಂಗಿ ಸುಜಾತ ಬಾಣಂತನಕ್ಕೆಂದು ಹಿಂದೂಪುರಕ್ಕೆ ಕಳುಹಿಸಿದ್ದರು ಎನ್ನಲಾಗಿದೆ. ಮತ್ತೆ ಬಾಲಕಿಯನ್ನು ದಿಬ್ಬೂರಿಗೆ ಕರೆತರಲು ಹಿಂದೂಪುರದ ತಂಗಿ ಸುಜಾತ ಮನೆಗೆ ತೆರಳಿದ್ದಾಗ ಮಗಳು ಕಾಣಿಸಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅಸಲಿ ಕತೆಯನ್ನು ತಂಗಿ ಸುಜಾತ ಬಿಚ್ಚಿಟ್ಟಿದ್ದಾಳೆ.
ಶ್ರೀರಾಮುಲು ಎಂಬಾತನಿಗೆ ಬಾಲಕಿಯನ್ನು ಮಾರಾಟ ಮಾಡಿರುವ ಬಗ್ಗೆ ಸುಜಾತ ಹೇಳಿಕೊಂಡಿದ್ದಳು. ಬಾಲಕಿಯನ್ನು ವಶದಲ್ಲಿಟ್ಟುಕೊಂಡಿದ್ದ ಶ್ರೀರಾಮುಲು ಬಾತುಕೋಳಿ ಮೇಯಿಸಲು ಒತ್ತೆಯಾಳಾಗಿ ಇರಿಸಿದ್ದ ಎನ್ನಲಾಗಿದೆ. ವಿಷಯ ತಿಳಿದ ಚೌಡಮ್ಮ, ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದಳು. ಇದಕ್ಕೆ ಶ್ರೀರಾಮುಲು ಒಪ್ಪಿರಲಿಲ್ಲ. ಸಾಲದ ಹಣ ಕೊಟ್ಟು ಕರೆದುಕೊಂಡು ಹೋಗುವಂತೆ ಹೇಳಿದ್ದ ಎನ್ನಲಾಗಿದೆ. ಹೀಗಾಗಿ ತುಮಕೂರಿಗೆ ಬಂದಿದ್ದ ಚೌಡಮ್ಮ ಮಗಳ ಸ್ಥಿತಿಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಬಾಲಕಿ ತಾಯಿಯ ದೂರು ಆಧರಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಬಾಲಕಿಯ ರಕ್ಷಣೆ ಮಾಡಿದ್ದು, ಸದ್ಯ ಬಾಲಕಿಯನ್ನು ಜಿಲ್ಲಾ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಈ ಬಗ್ಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.