‌ತುಮಕೂರು | ಅನೈತಿಕ ಪೊಲೀಸ್‌ ಗಿರಿ: 6 ಮಂದಿ ವಿರು‍ದ್ಧ ಪ್ರಕರಣ ದಾಖಲು

Update: 2024-01-29 09:33 GMT

ತುಮಕೂರು: ಯುವಕನೊಬ್ಬ ಬೇರೆ ಧರ್ಮದ ಯವತಿಯನ್ನು ಗಾಡಿಯಲ್ಲಿ ಕೂರಿಸಿಕೊಂಡು ಓಡಾಡುತ್ತಿದ್ದಾನೆ ಎಂಬ ಕಾರಣಕ್ಕೆ ರಾತ್ರಿವೇಳೆ ವಾಹನ ಅಡ್ಡಗಟ್ಟಿ ಹುಡುಗನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜ.26ರ ಗಣರಾಜೋತ್ಸವ ದಿನದಂದು ನಡೆದಿತ್ತು. ಈ ಸಂಬಂಧ ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ.

ನಗರದ ಎಂ.ಜಿ.ರಸ್ತೆಯ ಬಿ.ಎಸ್.ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ ಸಲ್ಮಾನ್ ಪಾಷ ಎಂಬ 26 ವರ್ಷದ ಯುವಕ ತನಗೆ ಪರಿಚಯವಿದ್ದ ಯುವತಿಯನ್ನು ಆಕೆ ಕೆಲಸ ಮಾಡುವ ಸ್ಥಳಕ್ಕೆ ಡ್ರಾಪ್‌ ಮಾಡುತ್ತಿದ್ದನು.

ಜನವರಿ 26ರ ರಾತ್ರಿ 9.30ರ ಸುಮಾರಿಗೆ ಯವತಿಯನ್ನು ಬೈಕ್‍ನಲ್ಲಿ ಅವರ ಮನೆಗೆ ಡ್ರಾಫ್ ಮಾಡಲು ಬನಶಂಕರಿ ಎರಡನೇ ಕ್ರಾಸ್‍ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಏಳೆಂಟು ಜನರ ತಂಡವೊಂದು ಬೈಕ್ ಅಡ್ಡ ಮಾರಕಾಸ್ತ್ರಗಳಿಂದ ಏಕಾಏಕಿ ಸಲ್ಮಾನ್ ಪಾಷ ಅವರ ಹಿಂದಲೆಗೆ ಬಲವಾಗಿ ಹೊಡೆದು, ಕೆಳಗೆ ಬಿದ್ದ ವೇಳೆ ಯುವತಿಯನ್ನು ಎಳೆದುಕೊಂಡು ಹೋಗಿದ್ದಲ್ಲದೆ, ಉಳಿದ ನಾಲ್ಕೈದು ಜನರು ನನ್ನ ಮೇಲೆ ನಿರಂತರ ಹಲ್ಲೆ ನಡೆಸಿದರು. ಈ ವೇಳೆ ಸಲ್ಮಾನ್ ಪಾಷ ತನ್ನ ಸ್ನೇಹಿತ ಅರ್ಬಾಝ್ ಗೆ ಪೋನ್ ಮಾಡಿ ಹಲ್ಲೆ ಮಾಡುತ್ತಿರುವ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಅರ್ಬಾಝ್ ಬಂದ ವೇಳೆ ಈತನನ್ನು ಬಿಡಿಸಿಕೊಳ್ಳಲು ಬರಬೇಡ. ಬಂದರೆ ನಿನ್ನ ಮೇಲೂ ಹಲ್ಲೆ ನಡೆಸುವುದಾಗಿ ಬೇದರಿಕೆ ಹಾಕಿದ ತಂಡ, ಹಲ್ಲೆ ಮುಂದುವರೆಸಿದ್ದರು. ಗಲಾಟೆ ಕೇಳಿ ಜನರು ಜಮಾಯಿಸಿದ್ದನ್ನು ಕಂಡು ಬಿಟ್ಟು ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಸ್ನೇಹಿತರ ಸಹಕಾರದಿಂದ ಆಸ್ಪತ್ರೆ ಸೇರಿದ ಹಲ್ಲೆಗೆ ಒಳಗಾದ ಸಲ್ಮಾನ್ ಪಾಷ, ಪೊಲೀಸರಿಗೆ ಹೇಳಿಕೆ ನೀಡಿದ್ದು, ಮಂಜು ಭಾರ್ಗವ ಎಂಬ ವ್ಯಕ್ತಿಯ ಕುಮ್ಮಕ್ಕಿನಿಂದ ಜೀವನ್, ಷರತ್, ಹನುಮಂತರಾಜು, ರವಿ ಸೇರಿದಂತೆ ಹಲವರು ನನ್ನನ್ನು ಸಾಯಿಸುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಮಂಜು ಭಾರ್ಗವ ನೀಡಿದ ಕುಮ್ಮಕ್ಕೇ ಕಾರಣ ಎಂದು ತಿಳಿಸಿದ್ದಾರೆ.

ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಜೀವನ್,ಶರತ್,ಹನುಮಂತರಾಜು, ರವಿ, ಮಂಜು ಭಾರ್ಗವ್ ಮತ್ತು ಮತ್ತೊಬ್ಬರ ವಿರುದ್ದ ಐಪಿಸಿ ಕಲಂ 114,341, 323, 307, 143, 147,148 ಮತ್ತು 149ರ ಅನ್ವಯ ಕೇಸ್ ದಾಖಲಿಸದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News