ಕುದುರೆಮುಖದಲ್ಲಿ ಹೊತ್ತಿ ಉರಿದ ಟೂರಿಸ್ಟ್ ವಾಹನ: 11 ಮಂದಿ ಪಾರು
ಉಡುಪಿ, ಡಿ.14: ಪ್ರಯಾಣಿಕನ್ನು ಕರೆದೊಯ್ಯುತ್ತಿದ್ದ ಟೂರಿಸ್ಟ್ ವಾಹನ ಟೆಂಪೋ ಟ್ರಾವೆಲರ್ ಬೆಂಕಿ ಅಕಸ್ಮಿಕದಿಂದ ಹೊತ್ತಿ ಉರಿದ ಘಟನೆ ಶನಿವಾರ ಕುದುರೆಮುಖದಲ್ಲಿ ನಡೆದಿದೆ.
ಉಡುಪಿಯಿಂದ ಮಾಳ ಕುದುರೆಮುಖ ಮೂಲಕ ಕಳಸ ಕಡೆಗೆ ತೆರಳುತ್ತಿದ್ದ ಉಡುಪಿಯ ಟೂರಿಸ್ಟ್ ವಾಹನದಲ್ಲಿ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ನೋಡ ನೋಡುತ್ತಿ ದ್ದಂತೆ ಬೆಂಕಿ ಕೆನ್ನಾಲಿಗೆಯು ವಾಹನವನ್ನು ವ್ಯಾಪಿಸಿತು.
ಕೂಡಲೇ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ವಾಹನದಿಂದ ಇಳಿದು ಹೊರಗೆ ಓಡಿ ಬಂದರು. ಕೆಲವೇ ಗಂಟೆಗಳಲ್ಲಿ ಬೆಂಕಿ ವಾಹನವನ್ನು ವ್ಯಾಪಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿ ಸಿಲ್ಲ. ಕಾರ್ಕಳ ಅಗ್ನಿಶಾಮಕ ಠಾಣೆ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಟೂರಿಸ್ಟ್ ವಾಹನದ ಪ್ರಯಾಣಿಕರಿಗೆ ಬೇರೆ ವ್ಯವಸ್ಥೆ ಮಾಡಿಸಿ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ಈ ಕಾರ್ಯಾಚರಣೆ ಯನ್ನು ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲರ್ಟ್ ಮೋನಿಸ್, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಪ್ರಮುಖರಾದ ನಿತ್ಯಾನಂದ, ಜಯ, ಮುಜಾಂಬಿಲ್ ನಡೆಸಿದ್ದಾರೆ.