ಫೆ.11ರ ಮಣಿಪಾಲ ಮ್ಯಾರಥಾನ್‌ನಲ್ಲಿ 15,000 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ: ಡಾ.ಎಚ್.ಎಸ್. ಬಲ್ಲಾಳ್
ಉಡುಪಿ, ಫೆ.7: ದೇಶದ ಪ್ರತಿಷ್ಠಿತ ಮ್ಯಾರಥಾನ್‌ಗಳಲ್ಲಿ ಒಂದೆಂದು ಮಾನ್ಯತೆ ಪಡೆದಿರುವ ಮಣಿಪಾಲ ಮ್ಯಾರಥಾನ್‌ನ ಆರನೇ ಆವೃತ್ತಿ ಫೆ.11ರಂದು ಮಣಿಪಾಲದಲ್ಲಿ ನಡೆಯಲಿದ್ದು, ಈ ಬಾರಿ ವಿವಿಧ ವಿಭಾಗಗಳಲ್ಲಿ ದೇಶ- ವಿದೇಶಗಳ ಸುಮಾರು 15,000ದಷ್ಟು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಮಣಿಪಾಲ ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಮೆರಿಕ, ಜಪಾನ್, ಫ್ರಾನ್ಸ್, ಟರ್ಕಿ ಸೇರಿ ಒಟ್ಟು ಎಂಟು ದೇಶಗಳ 100ಕ್ಕೂ ಅಧಿಕ ಮಂದಿ ಮಣಿಪಾಲ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಇಥಿಯೋಪಿಯಾ, ಕೀನ್ಯಾ, ಜರ್ಮನಿ, ಇಂಗ್ಲಂಡ್ ಹಾಗೂ ಆಸ್ಟ್ರೇಲಿಯಾಗಳಿಂದಲೂ ದೂರದ ಓಟಗಾರರು ಭಾಗವಹಿಸುವರು ಎಂದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಸಂಸ್ಥೆಯು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಭಾಗಿತ್ವದಲ್ಲಿ ಈ ಮ್ಯಾರಥಾನ್‌ನ್ನು ಆಯೋಜಿಸುತ್ತಿದ್ದು, ಇದು ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟಿತ ಮ್ಯಾರಥಾನ್ ಎನಿಸಿಕೊಳ್ಳಲಿದೆ ಎಂದರು.
200 ಮಂದಿ ಅಂಧ ಸ್ಪರ್ಧಿಗಳು: ಇದೇ ಮೊದಲ ಬಾರಿಗೆ ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಮೂಲಕ ಸುಮಾರು 200 ಮಂದಿ ಅಂಧರು ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಸುಮಾರು 150 ಮಂದಿ ವಿಶೇಷ ಚೇತನರು ಮಣಿಪಾಲ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಒಬ್ಬರು ಪೂರ್ಣ ಮ್ಯಾರಥಾನ್ (42.19ಕಿ.ಮೀ.) ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ಇಬ್ಬರು ಹಾಫ್ ಮ್ಯಾರಥಾನ್ (21.098ಕಿ.ಮೀ.)ನಲ್ಲಿ ಆರು ಮಂದಿ 10ಕಿ.ಮೀ. ಓಟದಲ್ಲಿ ಭಾಗವಹಿಸಲಿದ್ದಾರೆ. ಉಳಿದವರು ಇತರ ಸ್ಪರ್ಧೆಯಲ್ಲಿ ಸ್ಪರ್ಧಿಸುವರು ಎಂದು ವಿವರಿಸಿದರು.
ಸ್ಪರ್ಧಾ ವಿಭಾಗಗಳು: ಮಣಿಪಾಲ ಮ್ಯಾರಥಾನ್, ಅಂತಾರಾಷ್ಟ್ರೀಯ ಅಮೆಚೂರು ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ಮಾನ್ಯತೆಯೊಂದಿಗೆ ಅದರ ಮಾರ್ಗಸೂಚಿಯಂತೆ ನಡೆಯಲಿದೆ. ಮಣಿಪಾಲದಲ್ಲಿ ಪೂರ್ಣ ಮ್ಯಾರಥಾನ್ (42.195ಕಿ.ಮೀ.), ಹಾಫ್ ಮ್ಯಾರಥಾನ್ (21.098), 10ಕಿ.ಮೀ, 5ಕಿ.ಮೀ, 3ಕಿ.ಮೀ. ವಿಭಾಗಗಳಲ್ಲಿ ನಡೆಯಲಿದೆ. ಅಲ್ಲದೇ 3 ಕಿ.ಮೀ.ನ ಫನ್ ರೇಸ್ ಸಹ ನಡೆಯಲಿದೆ ಎಂದು ಡಾ.ಬಲ್ಲಾಳ್ ತಿಳಿಸಿದರು.
ಮೊದಲೆರಡು ವಿಭಾಗಗಳನ್ನು ಬಿಟ್ಟು ಉಳಿದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ವಯೋವರ್ಗಗಳೂ ಸೇರಿದಂತೆ ವಿವಿಧ ಉಪವಿಭಾಗಗಳಿರುತ್ತವೆ. ಪೂರ್ಣ ಮ್ಯಾರಥಾನ್ ಫೆ.11ರ ರವಿವಾರ ಮುಂಜಾನೆ 5:00 ಗಂಟೆಗೆ ಮಣಿಪಾಲ ಗ್ರೀನ್ಸ್‌ನಿಂದ ಪ್ರಾರಂಭಗೊಳ್ಳಲಿದೆ. ಬಳಿಕ ಹಂತ ಹಂತವಾಗಿ ಉಳಿದ ಸ್ಪರ್ಧೆಗಳಿಗೆ ಹಸಿರು ನಿಶಾನೆ ತೋರಲಾಗುವುದು ಎಂದರು.
21 ಲಕ್ಷರೂ. ಬಹುಮಾನ ನಿಧಿ: ಮ್ಯಾರಥಾನ್‌ನಲ್ಲಿ ವಿವಿಧ ವಿಭಾಗಗಳ ವಿಜೇತರಿಗೆ ಒಟ್ಟು 21 ಲಕ್ಷರೂ. ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ. ಪೂರ್ಣ ಮ್ಯಾರಥಾನ್‌ನ ಮೊದಲ ಮೂರು ಸ್ಥಾನಿಗಳಿಗೆ ಕ್ರಮವಾಗಿ 50ಸಾವಿರ, 30ಸಾವಿರ, 20 ಸಾವಿರ ಬಹುಮಾನವಿದ್ದರೆ, ಹಾಫ್ ಮ್ಯಾರಥಾನ್‌ಗೆ 30ಸಾವಿರ, 20ಸಾವಿರ, 10ಸಾವಿರ ರೂ.ನಗದು ಬಹುಮಾನವಿದೆ.
ಉಳಿದಂತೆ 10ಕಿ.ಮೀ. ವಿಜೇತರಿಗೆ 15,000ರೂ., 5ಕಿ.ಮೀ. ವಿಜೇತರಿಗೆ 7,000ರೂ., 3ಕಿ.ಮೀ. ವಿಜೇತರಿಗೆ 4,000ರೂ. ನಗದು ಬಹುಮಾನ ನೀಡಲಾಗುವುದು. ಈ ಬಾರಿ ಸ್ಪರ್ಧೆ ವಿಜೇತರನ್ನು ಘೋಷಿಸುತಿದ್ದಂತೆ ಬಹುಮಾನ ವಿತರಿಸಲಾಗುವುದು ಎಂದರು.
ಮಣಿಪಾಲ ಮ್ಯಾರಥಾನ್‌ನ ಆರನೇ ಆವೃತ್ತಿ ‘ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಉಪಶಾಮಕ ಆರೈಕೆ (ಹಾಸ್ಪೈಸ್ ಪೆಲಿಟೇವ್ ಕೇರ್)’ಯ ಕುರಿತು ಸಮಾಜದಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಮಾನವೀಯ ಆಶಯದ ಧ್ಯೇಯವಾಕ್ಯದೊಂದಿಗೆ ನಡೆಯಲಿದೆ ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಲೆ.ಜ.(ಡಾ.)ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿಗಳಾದ ಡಾ.ಶರತ್ ರಾವ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆಂಪರಾಜ್, ಡಾ.ಗಿರೀಶ್ ಮೆನನ್, ಡಾ.ನವೀನ್ ಸಾಲಿಸ್, ಡಾ.ಅವಿನಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.