ಸೆ.29: ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕನ್ನಡ ಭಾಷಾ ಪರೀಕ್ಷೆ

Update: 2024-09-26 16:10 GMT

ಉಡುಪಿ, ಸೆ.26: ಜಿಲ್ಲೆಯಲ್ಲಿ ಸೆ.29ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ, ಅವ್ಯವಹಾರಗಳಿಗೆ ಆಸ್ಪದ ನೀಡದೇ ನಡೆಸು ವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ನಡೆಸುವ ಕನ್ನಡ ಭಾಷೆ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರದಲ್ಲಿ ಮೇಲ್ವಿಚಾರಣೆ ನಡೆಸಲು ನೇಮಕ ಮಾಡಲಾದ ತಂಡಗಳು ಕೈಗೊಳ್ಳಬೇಕಾದ ಪೂರ್ವ ತಯಾರಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ್ಯಾದಂತ 17 ಪರೀಕ್ಷಾ ಕೇಂದ್ರಗಳಲ್ಲಿ ಸಪ್ಟೆಂಬರ್ 29ರಂದು ಪರೀಕ್ಷೆ ಜರುಗಲಿದ್ದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬೆಳಿಗ್ಗೆ 10:30ರಿಂದ ಅಪರಾಹ್ನ 12:30ರವರೆಗೆ ನಡೆಯಲಿದೆ. ಪರೀಕ್ಷೆ ಯಾವುದೇ ಲೋಪದೋಷ ಗಳಿಲ್ಲದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ತಪಾಸಣೆಗೊಳಗಾಗುವುದು ಕಡ್ಡಾಯವಾಗಿದೆ. ಮೊಬೈಲ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂ ಟೂತ್ ಡಿವೈಸ್, ಸ್ಮಾರ್ಟವಾಚ್, ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್ ಸೇರಿದಂತೆ ಯಾವುದೇ ರೀತಿಯ ಉಪಕರಣಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದರು.

ಅಭ್ಯರ್ಥಿಗಳು ಪರೀಕ್ಷೆ ವೇಳೆಯಲ್ಲಿ ಶೂ, ಸಾಕ್ಸ್‌ಗಳನ್ನು ಧರಿಸಲು ಅವಕಾಶವಿರುವುದಿಲ್ಲ. ಸಾಧಾರಣ ಚಪ್ಪಲಿಯನ್ನು ಧರಿಸಿ ಪರೀಕ್ಷೆಗೆ ಹಾಜರಾಗ ಬಹುದು. ತುಂಬು ತೋಳಿನ ಶರ್ಟ್, ಕುರ್ತಾ ಪೈಜಾಮವನ್ನು, ಜೀನ್ಸ್ ಪ್ಯಾಂಟ್ ಮತ್ತು ಯಾವುದೇ ಆಭರಣಗಳನ್ನು ಮೆಟಲ್ ಮತ್ತು ನಾನ್ ಮೆಟಲ್(ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ) ಪುಲ್ಲೋವರ್ಸ್, ಜಾಕೆಟ್ ಮತ್ತು ಸ್ವೆಟರ್ಸ್‌ಗಳನ್ನು ಧರಿಸಿ ಹಾಜರಾಗುವುದನ್ನು ನಿಷೇಧಿಸಲಾಗಿದೆ ಎಂದರು.

ಪರೀಕ್ಷೆಗಳು ಸುಗಮವಾಗಿ ನಡೆಯಲು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200ಮೀ. ಪರಿಮಿತಿಯೊಳಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗುವುದು ಎಂದ ಅವರು ಈ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವುದನ್ನು ನಿಬರ್ಂಧಿಸಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿ ತಿಳಿಸಿರುವ ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಾಧಿಕಾರ ನಿಗದಿಪಡಿಸಿರುವ ಸೂಚನೆಗಳನ್ನು ಸಂಬಂಧಪಟ್ಟವರು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ತಾಲೂಕುಗಳ ತಹಶೀಲ್ದಾರ್ ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ಮೇಲ್ವಿಚಾರಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News