ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂ ಸ್ವಾಧೀನ: ಡಿಸಿ ವಿದ್ಯಾಕುಮಾರಿ

Update: 2024-09-26 16:13 GMT

ಉಡುಪಿ, ಸೆ.26: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶದ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಆದ್ಯತೆಯ ಮೇಲೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೂಚನೆ ಗಳನ್ನು ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕೈಗಾರಿಕಾ ಸ್ಪಂದನ ಸಮಿತಿ, ಕ್ಲಸ್ಟರ್ ಸಮಿತಿ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಹಾಗೂ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಈಗಾಗಲೇ ಕೆರೆಬೆಟ್ಟು ಗ್ರಾಮದಲ್ಲಿ 31.28 ಎಕ್ರೆ, ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಸೇರಿದಂತೆ ಒಟ್ಟು 77.03 ಎಕ್ರೆ ಖಾಸಗಿ ಜಮೀನನ್ನು ಭೂಮಾಲಕರಿಂದ ಪರಿಹಾರ ಧನವನ್ನು ಪಾವತಿಸಿ, ನಿಯಮಾ ನುಸಾರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ 36.56 ಎಕ್ರೆ ಸರಕಾರಿ ಜಮೀನು ಮಂಜೂರಾತಿ ಪ್ರಕ್ರಿಯೆಯು ಬಾಕಿ ಇದೆ. ಈ ಕೂಡಲೇ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು.

ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 44.84 ಎಕ್ರೆ ಖಾಸಗಿ ಜಮೀನು ಹಾಗೂ 5.58 ಎಕ್ರೆ ಸರಕಾರಿ ಜಮೀನು ಸೇರಿದಂತೆ ಒಟ್ಟು 50.42 ಎಕ್ರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯ ಪ್ರಗತಿ ಕುಂಠಿತವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಈ ಬಗ್ಗೆ ವಿಶೇಷ ಗಮನಹರಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.

ಬೆಳಪು ಕೈಗಾರಿಕಾ ಪ್ರದೇಶದಲ್ಲಿ ಅತ್ಯಗತ್ಯ ಮೂಲಸೌಕರ್ಯಗಳಾದ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ತೊಂದರೆ ಉಂಟಾಗಿದ್ದು, ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ತಿಳಿಸಿದರು.

ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸಂಪರ್ಕ ಕಾಮಗಾರಿಗಳನ್ನು ಮಳೆಗಾಲ ಮುಗಿದ ಕೂಡಲೇ ಆದ್ಯತೆಯ ಮೇಲೆ ಕೈಗೊಳ್ಳುವಂತೆ ತಿಳಿಸಿದರು.ಳ್ಳಬೇಕು ಎಂದ ಅವರು, ಈ ಭಾಗದಲ್ಲಿರುವ ರೆಡಿುಕ್ಸ್ ಕೇಂದ್ರಗಳಲ್ಲಿ ವ್ಯವಸ್ಥಿತವಾದ ನಿರ್ವಹಣೆ ಇಲ್ಲದ ಕಾರಣ ವಾಯುಮಾಲಿನ್ಯ ಉಂಟಾ ಗುತ್ತಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಆರ್ಥಿಕ ನೆರವು ಕೋರಿದ ಅರ್ಜಿಗಳನ್ನು ಬ್ಯಾಂಕುಗಳು ನಿಯಮಾ ನುಸಾರ ಶೀಘ್ರವೇ ವಿಲೇವಾರಿ ಮಾಡಬೇಕು ಎಂದ ಅವರು, ಈ ಯೋಜನೆಯ ಆರ್ಥಿಕ ಲಾಭ ಪಡೆದು ಯಶಸ್ವಿಯಾದವರ ಯಶೋಗಾಥೆಯನ್ನು ಕ್ರೋಢೀಕರಿಸಿ, ಪ್ರಚಾರಪಡಿಸಬೇಕು ಎಂದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಪೌರಾಯುಕ್ತ ರಾಯಪ್ಪ, ಕೆ.ಐ.ಎ.ಡಿ.ಬಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News