ಸಮಾಜದ ಕುಕೃತ್ಯ ತೊಡೆದುಹಾಕುವ ಶಿಕ್ಷಣ ರೂಪಿಸಬೇಕಾಗಿದೆ: ನ್ಯಾ. ಕಿರಣ್ ಎಸ್ ಗಂಗಣ್ಣವರ್

Update: 2024-09-26 14:21 GMT

ಉಡುಪಿ: ಸಮಾಜದ ಅಸ್ಥಿರತೆಯಿಂದಾಗಿ ಬಾಲ್ಯವಿವಾಹ, ಬಾಲ ಕಾರ್ಮಿಕತೆ ಹಾಗೂ ದೌರ್ಜನ್ಯದಂಥ ಪ್ರಕರಣಗಳು ಕಂಡುಬರುತ್ತಿದ್ದು, ಇವುಗಳನ್ನು ವಿರೋಧಿಸುವುದು ಮಾತ್ರವಲ್ಲದೇ, ಸಮಾಜದಿಂದ ಇವುಗಳನ್ನು ತೊಡೆದುಹಾಕುವಂಥ ಶಿಕ್ಷಣವನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್.ಗಂಗಣ್ಣವರ್ ಹೇಳಿದ್ದಾರೆ.

ಗುರುವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರಕ್ಷಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ನಡೆದ ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಪ್ರಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರಿಗೆ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ ಕಾರ್ಯವೈಖರಿ ವೀಕ್ಷಣೆ ಮತ್ತು ಸಂವಾದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಸಮಾಜದಲ್ಲಿ ಇವು ಸ್ವಾತಂತ್ರ್ಯಪೂರ್ವದಲ್ಲೇ ಇದ್ದು, ಇವುಗಳ ವಿರುದ್ಧ ಅಂದಿನಿಂದಲೇ ದೊಡ್ಡಮಟ್ಟದ ಹೋರಾಟ ನಡೆದರೂ ಇನ್ನೂ ಸಮಾಜದಲ್ಲಿ ಇರುವುದನ್ನು ನೋಡಿದಾಗ ಸುಲಭದಲ್ಲಿ ಇವು ಹೋಗುವುದಿಲ್ಲ ಎಂಬುದು ಗೊತ್ತಾಗುತ್ತದೆ. ಸಮಾಜದಲ್ಲಿ ಇವು ಆಳವಾಗಿ ಇಳಿದುಹೋಗಿದೆ. ಇವುಗಳ ಕಾರಣ ಕುರಿತಂತೆ ಅಕಾಡೆಮಿಕ್ ಅಧ್ಯಯನ ನಡೆಯುವುದರ ಜೊತೆಗೆ ಇವುಗಳನ್ನು ಸಮಾಜದಿಂದ ತೊಡೆದು ಹಾಕುವ ಶಿಕ್ಷಣವನ್ನು ರೂಪಿಸಬೇಕಾಗಿದೆ ಎಂದರು.

ಸಮಾಜದಲ್ಲಿ ನಡೆಯುವ ಕೆಟ್ಟ ಕೃತ್ಯಗಳನ್ನು ವಿರೋಧಿಸುವುದರೊಂದಿಗೆ ಅದನ್ನು ತೊಡೆದುಹಾಕಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಸಮಾಜದಲ್ಲಿ ನಡೆಯುವ ಎಲ್ಲಾ ಕುಕೃತ್ಯಗಳು ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದರೂ ದೂರು ದಾಖಲಾಗುವುದಿಲ್ಲ. ದೂರುಗಳೆಲ್ಲವೂ ವಿಚಾರಣೆಗೊಳ ಗಾಗುವುದಿಲ್ಲ. ವಿಚಾರಣೆ ಹಂತಕ್ಕೆ ಬಂದರೂ ನಮ್ಮ ನ್ಯಾಯ ದಾನ ಪದ್ಧತಿಯ ಸಕಾರಾತ್ಮಕ ಹಾಗೂ ಲಿಬರಲ್ ಅಂಶಗಳಿಂದಾಗಿ ನ್ಯಾಯ ಮರೀಚಿಕೆ ಯಾಗುವ ಸಾಧ್ಯತೆ ಇರುತ್ತದೆ ಎಂದು ನ್ಯಾ.ಗಂಗಣ್ಣವ್ ಅಭಿಪ್ರಾಯಪಟ್ಟರು.

ದೂರುಗಳು ಬಂದಾಗ ತನಿಖೆ ನಡೆದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗುವ ವರೆಗಿನ ನ್ಯಾಯಿಕ ಪ್ರಕ್ರಿಯೆಗಳ ಕುರಿತು ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಭವಾತ್ಮಕ ವಾದ ಶಿಕ್ಷಣ ನೀಡುವ ಮೂಲಕ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ ಕಾರ್ಯವೈಖರಿ ತಿಳಿಸುವ ಮತ್ತು ಜನ ಸಾಮಾನ್ಯರಲ್ಲಿರುವ ಆಂತರಿಕ ಭಯವನ್ನು ಹೋಗಲಾಡಿಸಿ ಸ್ನೇಹಮಯ ಪರಿಸರ ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿ ಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಂವಾದ: ವಿದ್ಯಾರ್ಥಿನಿಯರು ಜಿಲ್ಲಾ ನ್ಯಾಯಾಲಯದ ಅಧಿಕಾರಿ ಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಸಮಾಜದ ಅನಿಷ್ಠ ಪದ್ಧತಿ ಗಳಾದ ಬಾಲಕಾರ್ಮಿಕ, ಬಾಲ್ಯವಿವಾಹದಂತಹ ಪದ್ಧತಿಗಳನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯ, ಲೈಂಗಿಕ ಅತ್ಯಾಚಾರ ಗಳಂತಹ ಪ್ರಕರಣಗಳು ನಡೆಯದ ರೀತಿಯಲ್ಲಿ ಘೋರ ಶಿಕ್ಷೆಗಳನ್ನು ವಿಧಿಸುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, ಜಿಲ್ಲೆಯ ಉಪಪೊಲೀಸ್ ಅಧೀಕ್ಷಕ ಡಿ.ಟಿ.ಪ್ರಭು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾ ಬಾಯಿ (ಪ್ರಭಾರ), ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ದೀಪಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜಾಥಾ: ಕಾರ್ಯಕ್ರಮಕ್ಕೂ ಮುನ್ನ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಸರಕಾರಿ ಬಾಲಕಿಯರ ಪದಪೂರ್ವ ಕಾಲೇಜಿನಿಂದ ಜಿಲ್ಲಾ ನ್ಯಾಯಾಲಯದವರೆಗೆ ಹಾಗೂ ಕಾರ್ಯಕ್ರಮದ ನಂತರ ನ್ಯಾಯಾಲಯದಿಂದ ನಗರ ಪೊಲೀಸ್ ಠಾಣೆಯವರೆಗೆ ಕಾರ್ಯವೀಕ್ಷಣೆಗೆ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾಥಾ ನಡೆಯಿತು.

ಬಾಲ್ಯವಿವಾಹ: ಅರ್ಚಕರ ವಿರುದ್ಧವೂ ಪ್ರಕರಣ

ಬಾಲ್ಯವಿವಾಹ ತಡೆಗಟ್ಟಲು ಸರಕಾರದ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ದೂರು ಸಲ್ಲಿಸಬಹುದಾಗಿದೆ. ಸ್ಥಳೀಯವಾಗಿ ಬಾಲ್ಯವಿವಾಹ ಆಗುವಂತಹ ಪ್ರಕರಣಗಳು ಕಂಡುಬಂದಲ್ಲಿ ಅಥವಾ ಮಾಹಿತಿ ಸಿಕ್ಕಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಕ್ಷಣ ಮಾಹಿತಿ ನೀಡುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.

ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಡೆದ ಸಂದರ್ಭಗಳಲ್ಲಿ ಅಲ್ಲಿನ ಅರ್ಚಕರು ಮಾಹಿತಿ ನೀಡದಿದ್ದಲ್ಲಿ ಅವರನ್ನೂ ಸೇರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News