ಉಡುಪಿ ಜಿಲ್ಲಾಸ್ಪತ್ರೆಯ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ವ್ಯತ್ಯಯ: ತಕ್ಷಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

Update: 2024-09-26 15:21 GMT

ಸಾಂದರ್ಭಿಕ ಚಿತ್ರ

ಉಡುಪಿ, ಸೆ.26: ಉಡುಪಿ ಜಿಲ್ಲಾಸ್ಪತ್ರೆ ಸಹಿತ ರಾಜ್ಯದಾದ್ಯಂತ ಸ್ಕ್ಯಾನಿಂಗ್ ಹಾಗೂ ಎಂಆರ್‌ಐ ಸೇವೆಯ ಗುತ್ತಿಗೆ ಪಡೆದ ಕಂಪೆನಿಗೆ ರಾಜ್ಯ ಸರಕಾರ ಬಿಲ್ ಪಾವತಿಸಲು ಬಾಕಿ ಇಟ್ಟಿರುವ ಪರಿಣಾಮ ರೋಗಿಗಳಿಗೆ ಸೇವೆ ಸಿಗದೇ ಸಂಕಷ್ಟ ಎದುರಾಗಿದ್ದು, ರಾಜ್ಯ ಸರಕಾರ ತಕ್ಷಣ ಸಮಸ್ಯೆ ಪರಿಹರಿಸುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ರೋಗಿಗಳಿಗೆ ಮಾತ್ರ ಎಂಆರ್‌ಐ ಸೇವೆ ನೀಡುತ್ತಿದ್ದು, ಇತರ ರೋಗಿಗಳಿಗೆ ವೈದ್ಯರ ಸಲಹೆಯ ಮೇರೆಗೂ ಸ್ಕ್ಯಾನಿಂಗ್ ಸೇವೆ ನೀಡುತ್ತಿಲ್ಲ. ಇದರ ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಗೆ 6 ತಿಂಗಳಿನಿಂದ ಬಿಲ್ ಪಾವತಿ ಬಾಕಿ ಇರುವ ಬಗ್ಗೆ ಸಂಸ್ಥೆ ಆರೋಪಿಸಿದ್ದು, ಸರಕಾರ ಆರೋಗ್ಯ ಸಂಬಂಧಿತ ಸೇವೆಗಳ ವಿಚಾರದಲ್ಲಿ ಎಂದಿಗೂ ರಾಜೀ ಮಾಡದೆ ಜನಸಾಮಾನ್ಯರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ತಕ್ಷಣ ಖಾಸಗಿ ಸಂಸ್ಥೆಗೆ ಬಾಕಿ ಮೊತ್ತ ಪಾವತಿಸಿ ವ್ಯತ್ಯಯ ವಾಗಿರುವ ಸೇವೆ ಮತ್ತೆ ಪ್ರಾರಂಭಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಯಶಪಾಲ್ ಸುವರ್ಣ ಆರೋಗ್ಯ ಸಚಿವರನ್ನು ಅಗ್ರಹಿಸುವುದಾಗಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News