ಪೌರ ಕಾರ್ಮಿಕರಿಗೆ ದೌರ್ಜನ್ಯ ಆರೋಪ: ಕ್ರಮಕ್ಕೆ ದಸಂಸ ಆಗ್ರಹ

Update: 2024-09-26 15:23 GMT

ಉಡುಪಿ, ಸೆ.26: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಉಡುಪಿ ನಗರಸಭೆಯ ಆರೋಗ್ಯ ಸಹಾಯಕ ಮತ್ತು ಪರಿಸರ ಅಭಿಯಂತರರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ, ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಸದಾ ಶ್ರಮಜೀವಿಗಳಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುತ್ತಿರುವ ಉಡುಪಿಯ ದಲಿತ ಪೌರ ಕಾರ್ಮಿಕರಿಗೆ ಇಲ್ಲಿನ ಅಧಿಕಾರಿ ವರ್ಗ ಪ್ರತಿನಿತ್ಯ ಮಾನಸಿಕ ಹಿಂಸೆ, ಶೋಷಣೆ ಮತ್ತು ದೌರ್ಜನ್ಯ ನಡೆಸುತ್ತಿದ್ದು, ಸಂವಿಧಾನ್ಮಾಕ ಬಡ್ತಿ, ಮೀಸಲಾತಿಯನ್ನು ಕೂಡ ವಂಚಿಸಿರುವುದಾಗಿ ಅವರು ಆರೋಪಿಸಿದ್ದಾರೆ.

ಕಳಪೆ ದರ್ಜೆಯ ಬೆಳಗಿನ ಉಪಹಾರ, ಗಂಬೂಟು, ಮಾಸ್ಕ್, ರೈನ್ ಕೋಟು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ನೀಡುತ್ತಿದ್ದು, ಹಬ್ಬದ ದಿನಗಳಲ್ಲಿ, ಅನಾರೋಗ್ಯದ ಸಂದರ್ಭದಲ್ಲಿ ರಜೆ ನೀಡದೆ ಜೀತಪದ್ಧತಿಯಂತೆ ದುಡಿಸುತ್ತಿರುವ ನಗರಸಭೆಯ ಆರೋಗ್ಯ ಸಹಾಯಕರ ಮತ್ತು ಪರಿಸರ ಅಭಿಯಂತರ ಮೇಲೆ ಸೂಕ್ತ ತನಿಖೆ ನಡೆಸಿ ದಲಿತ ದೌರ್ಜನ್ಯ ಕಾಯ್ದೆಯಡಿ ಕಾನೂನುಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.

ದಲಿತ ಪೌರ ಕಾರ್ಮಿಕರಿಗೆ ಮೂಲಭೂತ ಸೌಕರ್ಯದಿಂದ ವಂಚಿಸಿರುವ ಉಡುಪಿ ನಗರಸಭೆಯು ಸಾಮಾಜಿಕ ನ್ಯಾಯದಿಂದಲೂ ವಂಚಿಸಿದ್ದು, ಪೌರ ಕಾರ್ಮಿಕರ ನ್ಯಾಯಬದ್ದ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು. ಇವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡು ವುದಾಗಿ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಸಂಜೀವ ಬಳ್ಕೂರು, ಗಣೇಶ್ ನೆರ್ಗಿ ಹಾಗೂ ಇತರರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News