33 ವರ್ಷಗಳ ಹಳೆಯ ಪ್ರಕರಣದ ಆರೋಪಿ ಸೆರೆ
Update: 2024-08-21 16:03 GMT
ಉಡುಪಿ, ಆ.21: ಸುಮಾರು 33ವರ್ಷಗಳ ಹಿಂದಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು 80 ಬಡಗಬೆಟ್ಟು ಗ್ರಾಮ ಆತನ ಮನೆ ಬಳಿ ಆ.21ರಂದು ಬಂಧಿಸಿದ್ದಾರೆ.
80 ಬಡಗಬೆಟ್ಟು ಗ್ರಾಮದ ಗಣೇಶ್ ಪ್ರಭು(54) ಬಂಧಿತ ಆರೋಪಿ. 1992ರ ಫೆ.13ರಂದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಗಣೇಶ್ ಪ್ರಭು ಸಹಿತ 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಗಣೇಶ್ ಪ್ರಭು ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದರು. ಆದರೆ ಗಣೇಶ್ ಪ್ರಭು ಸುಮಾರು 33 ವರ್ಷಗಳ ಹಿಂದೆ ಕೆಲಸದ ಬಗ್ಗೆ ಬೆಂಗಳೂರಿಗೆ ಹೋಗಿ ತಲೆ ಮರೆಸಿಕೊಂಡಿದ್ದನು.
ಆರೋಪಿ ಪತ್ತೆಗೆ ವಾರೆಂಟು ಜಾರಿಯಾಗಿದ್ದು, ಎಸ್ಪಿ ಡಾ.ಅರುಣ ಕುಮಾರ್ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ದೇವರಾಜ ಟಿ.ವಿ ನಿರ್ದೇಶನದಂತೆ ಮಣಿಪಾಲ ಎಸ್ಸೈ ರಾಘವೇಂದ್ರ ಸಿ. ಮತ್ತು ಸಿಬ್ಬಂದಿ ಪ್ರಸನ್ನ ಕಾರ್ಯಾಚರಣೆಯನ್ನು ನಡೆಸಿ ಆರೋಪಿ ಗಣೇಶ್ ಪ್ರಭು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.