ಕೃಷಿಯೊಂದಿಗೆ ವಾಣಿಜ್ಯ ಬೆಳೆ ಬೆಳೆಸಿ: ಡಾ.ಧನಂಜಯ

Update: 2023-10-11 13:48 GMT

ಉಡುಪಿ : ರೈತರು ತಮ್ಮ ಕೃಷಿ ಜಮೀನು ನಿರ್ವಹಣೆಯ ಜೊತೆಗೆ ತೇಗ, ಮಹಾಘನಿ, ರಕ್ತಚಂದನದಂಥ ವಾಣಿಜ್ಯ ಬೆಳೆ ಯನ್ನು ಬೆಳೆಸಿದರೆ ಆಪತ್ಕಾಲಕ್ಕೆ ವಿಮೆ ಮಾಡಿಸಿದಂತೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ಹೇಳಿದ್ದಾರೆ.

ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಜಿಲ್ಲಾ ಕೃಷಿಕ ಸಂಘ ಕರಂಬಳ್ಳಿ ಹಾಗೂ ಪೆರಂಪಳ್ಳಿ ವಲಯ ಸಮಿತಿ, ಶ್ರೀವೆಂಕಟರಮಣ ದೇವಸ್ಥಾನ ಕರಂಬಳ್ಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸಹಯೋಗದೊಂದಿಗೆ ಕರಂಬಳ್ಳಿ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಭೂ ಅಗೆತ ಏನಿದ್ದರೂ ನವಂಬರಲ್ಲಿ ಮಾಡಿದರೆ ಉತ್ತಮ. ಮಳೆಗಾಲದಲ್ಲಿ ಜಮೀನು ಅಗೆತ, ಕಳೆ ಹುಲ್ಲು ಅಗೆತ ಮಾಡಿದರೆ, ಭೂ ಫಲವತ್ತತೆ ನಶಿಸುತ್ತದೆ ಮತ್ತು ಮಣ್ಣಿನ ಸವಕಳಿ ಹೆಚ್ಚಾಗಿ ಇಳುವರಿ ಕುಂಠಿತವಾಗುತ್ತದೆ ಎಂದರು.

ಪ್ರಗತಿಪರ ಕೃಷಿಕ ಹಾಗೂ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾತನಾಡಿ, ಕೀಟನಾಶಕ, ರೋಗ ನಿಯಂತ್ರಕ ರಾಸಾಯನಿಕ ಅತೀವ ಬಳಕೆಯಿಂದ ಪ್ರಕೃತಿದತ್ತ ನಿಯಂತ್ರಕ ಪಕ್ಷಿ, ಎರೆಹುಳ ದಂತಹ ಜೀವ ಸಂಕುಲ ನಾಶಗೊಳ್ಳುತ್ತಿದೆ. ಸಾವಯವ ಕ್ರಮಗಳು ಮಾತ್ರ ಎಲ್ಲಾ ಜೀವ ಸಂಕುಲ ಉಳಿಸಬಲ್ಲುದು ಎಂದರು.

ಮಾಜಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡ ಉಡುಪಿಯ ಮುಖ್ಯ ಪ್ರಬಂಧಕ ಹರ್ಷ ಟಿ.ಜಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಭಾಗವ ಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯಾಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ, ದೇವಸ್ಥಾನದ ಅರ್ಚಕ ಗೋವಿಂದ ಐತಾಳ್, ಕರಂಬಳ್ಳಿ ಬ್ರಾಹ್ಮಣ ಸಮಿತಿ ಉಪಾಧ್ಯಕ್ಷ ರಂಗನಾಥ ಸಾಮಗ. ಕೆ. ನಾಗರಾಜ ಭಟ್, ಕುಮಾರಸ್ವಾಮಿ ಉಡುಪ, ಚಂದ್ರಶೇಖರ ಶೀಂಬ್ರ ಉಪಸ್ಥಿತರಿದ್ದರು.

ರಾಜ್ಯ ಪ್ರಶಸ್ತಿ ವಿಜೇತ ಮಂದಾರ್ತಿಯ ಪ್ರಗತಿಪರ ಕೃಷಿಕ ಶಂಭು ಶಂಕರ ರಾವ್ ಅವರನ್ನು ಸನ್ಮಾನಿಸಲಾಯಿತು. ಪ್ರಿಯಂವದಾ ಐತಾಳ್ ಕರಂಬಳ್ಳಿ ಸ್ವಾಗತಿಸಿದರು. ಸಂಘದ ಕರಂಬಳ್ಳಿ ವಲಯಾಧ್ಯಕ್ಷ ಕೆ.ಶ್ರೀಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಭಟ್ ವಂದಿಸಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News