ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿ: ಮೊದಲ ಬಾರಿ ಚಾಂಪಿಯನ್ ಪಟ್ಟವೇರಿದ ಮಂಗಳೂರು ವಿವಿ
ಉಡುಪಿ, ನ.26: ಆತಿಥೇಯ ಮಂಗಳೂರು ವಿವಿ, ಅಖಿಲ ಭಾರತ ಅಂತರ ವಿವಿ ಕಬಡ್ಡಿ ಟೂರ್ನಿಯಲ್ಲಿ ಮೊತ್ತಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ನಗರದ ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ರವಿವಾರ ನಡೆದ ಈ ಟೂರ್ನಿಯ ಫೈನಲ್‌ನಲ್ಲಿ ಮಂಗಳೂರು ವಿವಿ, ತನ್ನ ಎದುರಾಳಿ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ತಂಡವನ್ನು 47-15 ಅಂಕಗಳ ಅಂತರದಿಂದ ಏಕಪಕ್ಷೀಯವಾಗಿ ಪರಾಭವಗೊಳಿಸಿತು.
ಈ ಮೂಲಕ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸಿದ ಮಂಗಳೂರು ವಿವಿ, ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಈ ಹಿಂದೆ 1981-82 ಹಾಗೂ 1990-91ನೇ ಸಾಲಿನಲ್ಲೂ ಫೈನಲ್ ಪ್ರವೇಶಿಸಿದ್ದ ಮಂಗಳೂರು ವಿವಿ ಎರಡು ಬಾರಿಯೂ ಮದರಾಸು ವಿವಿ ಕೈಯಲ್ಲಿ ಪರಾಭವಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇದಾದ 33 ವರ್ಷಗಳ ಬಳಿಕ ಮೊದಲ ಬಾರಿ ಫೈನಲ್‌ಗೇರಿದ್ದ ಮಂಗಳೂರು ವಿವಿ, ಇಂದು ಚೆನ್ನೈನದೇ ಆದ ವೆಲ್ಸ್ ವಿವಿ ತಂಡವನ್ನು ಪರಾಭವಗೊಳಿಸುವ ಮೂಲಕ ಇನ್ನೊಂದು ಸಾಧನೆಯನ್ನೂ ಮಾಡಿದೆ. ಈ ಬಾರಿಯ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ವೆಲ್ಸ್ ವಿವಿ, ಮಂಗಳೂರು ವಿವಿಯನ್ನು ಪರಾಭವಗೊಳಿಸಿತ್ತು. ಹೀಗಾಗಿ ವೆಲ್ಸ್ ವಿವಿ ವಲಯದ ಅಗ್ರಸ್ಥಾನಿಯಾಗಿ ಹಾಗೂ ಮಂಗಳೂರು ವಿವಿ ಎರಡನೇ ಸ್ಥಾನಿಯಾಗಿ ಈ ಟೂರ್ನಿಯಲ್ಲಿ ಸ್ಪರ್ಧಿಸಿದ್ದವು. ಮಂಗಳೂರು ವಿವಿ ಅಂದಿನ ಸೋಲಿಗೆ ತನ್ನ ನೆಲದಲ್ಲಿ ಮುಯ್ಯಿ ತೀರಿಸಿಕೊಂಡಂತಾಗಿದೆ.
ಕೊನೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಅದಮಾರು ಮಠದ ಕಿರಿಯ ಯತಿಗಳೂ, ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರೂ ಆದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಮಂಗಳೂರು ವಿವಿಗೆ ಚಾಂಪಿಯನ್ ಟ್ರೋಫಿಯನ್ನೂ, ಚೆನ್ನೈ ವೆಲ್ಸ್ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿಯನ್ನೂ ವಿತರಿಸಿದರು.
ಉಳಿದಂತೆ ಟೂರ್ನಿಯ ಅತ್ಯುತ್ತಮ ಆಲ್‌ರೌಂಡರ್ ಆಗಿ ಚೆನ್ನೈ ವೆಲ್ಸ್ ವಿವಿ ತಂಡದ ಬಾಬು, ಉತ್ತಮ ರೈಡರ್ ಆಗಿ ಮಂಗಳೂರು ವಿವಿಯ ರತನ್ ಹಾಗೂ ಉತ್ತಮ ರಕ್ಷಣಾ ಆಟಗಾರನಾಗಿ ಮಂಗಳೂರು ವಿವಿಯ ವಿನೋದ್ ಆಯ್ಕೆಯಾಗಿದ್ದು, ಈ ವೈಯಕ್ತಿಕ ಪ್ರಶಸ್ತಿಗಳನ್ನು ಸಹ ಸ್ವಾಮೀಜಿಯಿಂದ ಸ್ವೀಕರಿಸಿದರು.
ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಟೂರ್ನಿ ಫೈನಲ್ ನಿರೀಕ್ಷೆಯ ಮಟ್ಟಕ್ಕೇರಲಿಲ್ಲ. ತವರಿನ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಸಂಪೂರ್ಣ ಬೆಂಬಲ ಪಡೆದ ಮಂಗಳೂರು ವಿವಿ, ಆಟ ಪ್ರಾರಂಭಗೊಳ್ಳುತಿದ್ದಂತೆ ಸಾಧಿಸಿದ ಹಿಡಿತವನ್ನು ಸಡಿಲಿಸದೇ ಎದುರಾಳಿ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.
ಪ್ರಾರಂಭದಲ್ಲೇ ಆಕ್ರಮಣ: ಅಪರಾಹ್ನ ಪಂದ್ಯ ಪ್ರಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ಮೂರು ರೈಡ್‌ಗಳ ಮೂಲ 4-0 ಮುನ್ನಡೆ ಪಡೆದ ಮಂಗಳೂರು ವಿವಿ ಅನಂತರ ಹಿಂದಿರುಗಿ ನೋಡಲಿಲ್ಲ. ಮಂಗಳೂರು ತಂಡ 9-0 ಮುನ್ನಡೆ ಪಡೆದ ನಂತರ ವೆಲ್ಸ್ ವಿವಿ ಮೊದಲ ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಸತತ ಅಂಕ ಗಳಿಸುವ ಮೂಲಕ 22-05ರ ಮುನ್ನಡೆ ಸಾಧಿಸಿದ ಮಂಗಳೂರು ಮಧ್ಯಂತರದ ವೇಳೆಗೆ ಮುನ್ನಡೆಯನ್ನು 29-06ಕ್ಕೆ ಏರಿಸಿಕೊಂಡಿತು.
ನಂತರವೂ ಪಂದ್ಯದ ಮೇಲೆ ತನ್ನ ಬಿಗಿ ಹಿಡಿತವನ್ನು ಸಡಿಲಿಸದ ಮಂಗಳೂರು ವಿವಿ ರತನ್, ಯಶ್ ಹಾಗೂ ಮಾಯಾಂಕ್ ಅವರ ಸತತ ಆಕ್ರಮಣಕಾರಿ ಆಟದಿಂದ ಅಂಕ ಗಳಿಸುತ್ತಾ ಸಾಗಿ 38-11 ಇದ್ದ ಮುನ್ನಡೆ ಯನ್ನು ಅಂತಿಮವಾಗಿ 47-15ರ ಗೆಲುವಾಗಿ ಪಂದ್ಯವನ್ನು ಜಯಿಸಿತು.
ಸೆಮಿಫೈನಲ್: ಇದಕ್ಕೆ ಮುನ್ನ ಇಂದು ಬೆಳಗ್ಗೆ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಮಂಗಳೂರು ವಿವಿ, ಹರ್ಯಾಣ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿಯನ್ನು 49-35 ಅಂಕಗಳ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿ ಫೈನಲಿಗೆ ಪ್ರವೇಶಿಸಿತ್ತು. ಮಧ್ಯಂತರದ ವೇಳೆಗೆ ಮಂಗಳೂರು ವಿವಿ 30-15 ಅಂಕಗಳ ಮುನ್ನಡೆಯಲ್ಲಿತ್ತು.
ದಿನದ ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಹರಿಯಾಣ ರೋಹ್ಟಕ್‌ನ ಸ್ವಾಮಿ ದಯಾನಂದ ವಿವಿ ಸೋಲಿನ ಕಹಿ ಅನುಭವಿಸಿತು. ದಕ್ಷಿಣ ವಲಯದ ಅಗ್ರಸ್ಥಾನಿ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ವಿವಿ, ಎಂಡಿ ವಿವಿ ಯನ್ನು 49-42 ಅಂಕಗಳ ಅಂತರದಿಂದ ಪರಾಭವಗೊಳಿಸಿತು.
ನಿನ್ನೆ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಎದುರಾಳಿಯನ್ನು ಹೆಚ್ಚುವರಿ ಅವಧಿಯ ರೈಡ್‌ನಲ್ಲಿ ರೋಚಕವಾಗಿ ಹಿಮ್ಮೆಟ್ಟಿಸಿದ್ದ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ತಂಡ ಇಂದು ಮದ್ಯಂತರದ ಅವಧಿಗೆ 21-23 ಅಂಕಗಳ ಹಿನ್ನಡೆಯಲ್ಲಿತ್ತು. ವಿರಾಮ ಬಳಿಕ ಒಮ್ಮಿಂದೊಮ್ಮೆಗೆ ತನ್ನ ಆಟವನ್ನು ಮೇಲ್ಮಟ್ಟಕೇರಿಸಿಕೊಂಡ ವೆಲ್ಸ್ ತಂಡ 47-37ರ ಮುನ್ನಡೆಯನ್ನು ಸಾಧಿಸಿ ಅಂತಿಮವಾಗಿ 49-42ರ ಅಂತರದ ಜಯ ದಾಖಲಿಸಿತು.
ಸಮಾರೋಪ ಸಮಾರಂಭ: ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಾಧಿಕಾರಿ ಡಾ.ಎ.ಪಿ.ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಶ್ರೀಗಳಾದ ಶ್ರೀಈಶಪ್ರಿಯ ತೀರ್ಥರು ವಿಜೇತರಿಗೆ ಬಹುಮಾನ ವಿತರಿಸಿದರು. ಅಲ್ಲದೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ಕ್ರೀಡಾಪಟುಗಳನ್ನು ಸ್ವಾಮೀಜಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಮುಖಂಡ ದಿನೇಶ್ ಪುತ್ರನ್, ಖ್ಯಾತ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್, ಅಖಿಲ ಭಾರತ ವಿವಿ ಮಂಡಳಿಯ ವೀಕ್ಷಕ ಡಾ.ಸುನಿಲ್ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಡಾ.ಎಂ.ಆರ್.ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್. ಸ್ವಾಗತಿಸಿದರೆ, ಕನ್ನಡ ವಿಭಾಗದ ಡಾ.ಮಂಜುನಾಥ ಕರಬ, ಪ್ರಜ್ಞಾಗೌರವ ಸನ್ಮಾನ ಪಡೆದ ವಿದ್ಯಾರ್ಥಿಗಳ ವಿವರ ನೀಡಿದರು. ಟೂರ್ನಿಯ ಸಂಚಾಲಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು.