ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ: ಸೆ.ಫೈನಲ್‌ಗೇರಿದ ಮಂಗಳೂರು, ಎಂಡಿ ವಿವಿ ರೋಹ್ಟಕ್

Update: 2023-11-25 17:25 GMT

ಉಡುಪಿ, ನ.25: ಆತಿಥೇಯ ಮಂಗಳೂರು ವಿವಿ, ಪೂರ್ಣಪ್ರಜ್ಞ ಕಾಲೇಜಿನ ಆಶ್ರಯದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾ ನಿಲಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ತನ್ನ ವಿಜಯಿ ನಾಗಾಲೋಟವನ್ನು ಮುಂದು ವರಿಸಿದ್ದು ಇದೀಗ ಸೆಮಿಫೈನಲ್‌ಗೇರಿ ನಿಂತಿದೆ.

ಅದೇ ರೀತಿ ಹಾಲಿ ಚಾಂಪಿಯನ್ ಆಗಿರುವ ಹರಿಯಾಣ ರೋಹ್ಟಕ್‌ನ ಸ್ವಾಮಿ ದಯಾನಂದ ವಿವಿ ಸಹ ಸತತ ಎರಡನೇ ಬಾರಿಗೆ ಸೆಮಿಫೈನಲ್‌ಗೇರಿದೆ.

ಶನಿವಾರ ನಡೆದ ಕೊನೆಯ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಮಂಗಳೂರು ವಿವಿ ತನ್ನ ಎದುರಾಳಿಯಾಗಿದ್ದ ರಾಜಸ್ತಾನ ಕೋಟದ ಕೋಟ ವಿಶ್ವ ವಿದ್ಯಾನಿಲಯ ತಂಡವನ್ನು 46-31 ಅಂಕಗಳ ಅಂತರದಿಂದ ಪರಾಭವಗೊಳಿಸಿತು. ಆತಿಥೇಯ ತಂಡಕ್ಕೆ ನಾಳಿನ ಸೆಮಿಫೈನಲ್‌ನಲ್ಲಿ ಮೂರು ತಂಡಗಳಲ್ಲೇ ಸುಲಭದ ಎದುರಾಳಿ ದೊರಕಿದ್ದು, ಹರ್ಯಾಣದ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿಯನ್ನು ಎದುರಿಸಿ ಆಡಲಿದೆ.

ಕಳೆದ ವರ್ಷದ ಚಾಂಪಿಯನ್ ತಂಡವಾದ ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿ, ತನ್ನ ಕ್ವಾರ್ಟರ್ ಫೈನಲ್ ಎದುರಾಳಿಯಾಗಿದ್ದ ರಾಜಸ್ತಾನ ಶ್ರೀ ಜಗದೀಶ್‌ಪ್ರಸಾದ್ ಝಾಬರ್‌ಮಾಲ್ ಟೈಬರ್‌ವಾಲಾ ವಿವಿಯನ್ನು (ಎಸ್‌ಜೆಐಟಿ) 43-31 (12 ಅಂಕ) ಅಂತರದಿಂದ ಪರಾಭವಗೊಳಿಸಿತು. ನಾಳಿನ ಮೊದಲ ಸೆಮಿಫೈನಲ್‌ನಲ್ಲಿ ಅದು ಇಂದು ಅತ್ಯಂತ ರೋಚಕ ಗೆಲುವು ದಾಖಲಿಸಿದ ಚೆನ್ನೈನ ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ತಂಡವನ್ನು ಎದುರಿಸಿ ಆಡಲಿದೆ.

ಹೆಚ್ಚುವರಿ ಅವಧಿ ಆಟ: ವೆಲ್ಸ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ ಹಾಗೂ ಮಹಾರಾಷ್ಟ್ರ ಔರಂಗಬಾದ್‌ನ ಡಾ.ಬಾಬಾಸಾಹೇಬ್ ಅಂಬೇಡ್ಕ್ ಮರಾಠವಾಡ ವಿವಿಯನ್ನು ಹೆಚ್ಚುವರಿ ಅವಧಿ ಆಟದಲ್ಲಿ ಎರಡು ಅಂಕಗಳಿಂದ ಹಿಮ್ಮೆಟ್ಟಿಸಿ ಸೆಮಿಫೈನಲ್‌ಗೆ ನೆಗೆಯಿತು. ಮಧ್ಯಂತರ ಅವಧಿಯ ವೇಳೆಗೆ 20-17 ಅಂಕಗಳಿಂದ ಮುಂದಿದ್ದ ವೆಲ್ಸ್ ವಿವಿಗೆ ತೀವ್ರ ಪ್ರತಿರೋಧ ತೋರಿಸಿದ ಮರಾಠವಾಡ ವಿವಿಯ ಆಟಗಾರರು ನಿಗದಿತ ಅವಧಿ ಆಟ ಮುಗಿದಾಗ 35-35ರ ಸಮಬಲ ನೀಡುವಲ್ಲಿ ಯಶಸ್ವಿಯಾದರು.

ಪಂದ್ಯ ಟೈನಲ್ಲಿ ಮುಗಿದ ಕಾರಣ ವಿಜಯಿ ತಂಡವನ್ನು ನಿರ್ದರಿಸಲು ಪ್ರತಿ ತಂಡಕ್ಕೆ ಐದು ಹೆಚ್ಚುವರಿ ರೈಡ್‌ಗಳನ್ನು ನೀಡಲಾಯಿತು. ಇದರಲ್ಲಿ ಚೆನ್ನೈ ತಂಡ, 7 ಅಂಕಗಳನ್ನು ಸಂಗ್ರಹಿಸಿದರೆ, ಔರಂಗಬಾದ್ ವಿವಿ ಕೇವಲ 5 ಅಂಕ ಗಳಿಸಿ (ಅಂತಿಮವಾಗಿ 42-40ರ ಅಂತರ) ನಿರಾಶೆ ಅನುಭವಿಸಿತು.

ಮಂಗಳೂರು ವಿವಿಗೆ ನಾಳೆ ಸೆಮಿಫೈನಲ್ ಎದುರಾಳಿಯಾಗಿರುವ ಭಿವಾನಿಯ ಚೌಧುರಿ ಬನ್ಸಿಲಾಲ್ ವಿವಿ, ಅಚ್ಚರಿಯ ಫಲಿತಾಂಶದೊಂದಿಗೆ ಸೆಮಿಫೈನಲ್‌ಗೇರಿದೆ. ಅದು ಕಳೆದ ಬಾರಿ ರನ್ನರ್ ಅಪ್ ತಂಡವಾಗಿರುವ ಹಾಗೂ ಈ ಬಾರಿ ಉತ್ತರ ವಲಯದಲ್ಲಿ ಅಗ್ರಸ್ಥಾನಿಯಾಗಿದ್ದ ಪಂಜಾಬ್‌ನ ಗುರು ಕಾಶಿ ವಿವಿಯನ್ನು 39-35 ಅಂಕಗಳ ಅಂತರಿಂದ ಪರಾಭವಗೊಳಿಸಿತು. ಬನ್ಸಿಲಾಲ್ ವಿವಿ ಉತ್ತರ ವಲಯದಲ್ಲಿ ಮೂರನೇ ಸ್ಥಾನ ಪಡೆದು ಇಲ್ಲಿ ಆಡಲು ಅರ್ಹತೆ ಪಡೆದಿತ್ತು.

ನಾಳೆ ಬೆಳಗ್ಗೆ 7.30ಕ್ಕೆ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈನ ವೆಲ್ಸ್ ವಿವಿ, ರೋಹ್ಟಕ್‌ನ ಮಹರ್ಷಿ ದಯಾನಂದ ವಿವಿಯನ್ನೂ, 8.30ಕ್ಕೆ ಎರಡನೇ ಸೆಮಿಫೈನಲ್‌ನಲ್ಲಿ ಆತಿಥೇಯ ಮಂಗಳೂರು ವಿವಿ, ಭಿವಾನಿ ಚೌಧುರಿ ಬನ್ಸಿಲಾಲ್ ವಿವಿಯನ್ನು ಎದುರಿಸಿ ಆಡಲಿವೆ. ಅಪರಾಹ್ನ 12ಕ್ಕೆ ಚಾಂಪಿಯನ್ ತಂಡವನ್ನು ನಿರ್ಧರಿಸಲು ಪೈನಲ್ ಪಂದ್ಯ ನಡೆಯಲಿದೆ.

ಅಪರಾಹ್ನ 2ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು, ಸಾಧಕರನ್ನು ಸನ್ಮಾನಿಸುವ ಪ್ರಜ್ಞಾಗೌರವ್ ಕಾರ್ಯಕ್ರಮವೂ ಇದರೊಂದಿಗೆ ನಡೆಯಲಿದೆ.


















 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News