ಗೋವಾದಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ

Update: 2024-01-04 13:17 GMT

ಉಡುಪಿ, ಜ.4: ಗೋವಾದ ಕಾಕೋಡದಲ್ಲಿರುವ ಮಹಾದೇವ ದೇವಾಲಯದ ಆವರಣದಲ್ಲಿ ಕಂಡುಬಂದ ಒಂದು ಪ್ರಾಚೀನ ಅಪ್ರಕಟಿತ ಕನ್ನಡ ಶಾಸನವನ್ನು ಗೋವಾದ ಪರಿಸರ ಆಂದೋಲನದ ಹೋರಾಟಗಾರ ಡಾ.ರಾಜೇಂದ್ರ ಕೇರ್ಕರ್ ಅವರು ಗುರುತಿಸಿ ಗಮನಕ್ಕೆ ತಂದಿದ್ದಾರೆ ಎಂದು ಶಿರ್ವ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಈ ಶಾಸನ ಆಯತಾಕಾರದ ಶಿಲೆಯ ಮೇಲೆ ಕನ್ನಡ ಭಾಷೆ ಮತ್ತು ಲಿಪಿ ಹಾಗೂ ಸಂಸ್ಕೃತ ಭಾಷೆ ಮತ್ತು ನಾಗರಿ ಲಿಪಿಯಲ್ಲಿ ಬರೆಯಲಾದ ದ್ವಿಭಾಷಾ ಶಾಸನವಾಗಿದೆ. ಶಾಸನ ಸ್ವಸ್ತಿಶ್ರೀ ಎಂಬ ಮಂಗಲವಾಚಕ ಪದದೊಂದಿಗೆ ಆರಂಭವಾಗಿದೆ. ಗೋವಾದಲ್ಲಿನ ಒಂದು ಮಂಡಲದ ಆಳ್ವಿಕೆಯನ್ನು ನಡೆಸುತ್ತಿದ್ದ, ತಳಾರ ನೇವಯ್ಯ ಎಂಬುವನು ತನ್ನ ಮಗ ಗುಂಡಯ್ಯನ ಶೌರ್ಯ, ಸಾಹಸವನ್ನು ದುಃಖದಿಂದ ಕೊಂಡಾಡುತ್ತಾ, ತನ್ನ ಆಸೆಯನ್ನು ಈಡೇರಿಸುವ ಪ್ರತಿಜ್ಞೆ ಮಾಡಿ, ಬಂದರು ನಗರ ಗೋಪುರವನ್ನು (ಈಗಿನ ಗೋವಾ) ವಶಪಡಿಸಿಕೊಂಡು, ತನ್ನ ತಂದೆಯ ಆಸೆಯನ್ನು ಈಡೇರಿಸಿ ವೀರಮರಣವನ್ನು ಹೊಂದಿದ ಎಂಬುದನ್ನು ಈ ಶಾಸನ ವಿವರಿಸುತ್ತದೆ.

ಮೃತ ಗುಂಡಯ್ಯನ ವೀರಸ್ಮಾರಕವಾಗಿ ನೇವಯ್ಯನು ಈ ವೀರಶಾಸನವನ್ನು ಕಾಕೋಡದ ಮಹಾದೇವಾಲಯದ ಆವರಣದಲ್ಲಿ ನಿಲ್ಲಿಸಿದ ಸಂಗತಿಯನ್ನು ಶಾಸನದಲ್ಲಿ ದಾಖಲಿಸಲಾಗಿದೆ.

ಶಾಸನದ ಮಹತ್ವ: ಈ ಶಾಸನವನ್ನು 10ನೇ ಶತಮಾನದ ಲಿಪಿಯಲ್ಲಿ ಬರೆಯಲಾಗಿದೆ. ಶಾಸನದಲ್ಲಿ ಯಾವುದೇ ರಾಜಮನೆತನ ಹಾಗೂ ಕಾಲದ ಉಲ್ಲೇಖ ಕಂಡುಬರುವುದಿಲ್ಲ. ಕರ್ನಾಟಕದ ಕದಂಬರು, ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನಿಗೆ ರಾಷ್ಟ್ರಕೂಟರನ್ನು ಪದಚ್ಯುತಗೊಳಿಸುವಲ್ಲಿ ನೆರವಾಗಿದ್ದರು. ಆದ್ದರಿಂದ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನು ಕದಂಬ ರಾಜಮನೆತನದ ಶಾಸ್ತದೇವನನ್ನು ಗೋವಾದ ಮಹಾಮಂಡಲೇಶ್ವರ ನೆಂದು ನೇಮಿಸಿದ್ದನು.

ಗೋವಾದ ಶಿಲಾಹಾರರಿಂದ ಚಂದಾವರವನ್ನು ವಶಪಡಿಸಿಕೊಂಡ ಕದಂಬ ಶಾಸ್ತದೇವನು ಕ್ರಿ.ಶ. 960ರಲ್ಲಿ ಗೋವಾದ ಚಂದಾವರವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡು, ಗೋವಾದಲ್ಲಿ ಸ್ವತಂತ್ರ ಕದಂಬ ರಾಜಮನೆತನದ ಆಳ್ವಿಕೆಯನ್ನು ಆರಂಭಿಸಿದ್ದನು. ನಂತರ ಬಂದರು ನಗರ ಗೋಪುರಪಟ್ಟಣವನ್ನು ವಶಪಡಿಸಿಕೊಂಡು ಸಂಪೂರ್ಣ ದಕ್ಷಿಣ ಗೋವಾದ ಮೇಲೆ ತನ್ನ ಅಧಿಪತ್ಯ ವನ್ನು ಸ್ಥಾಪಿಸಿದ್ದನು.

ಶಾಸನದಲ್ಲಿ ಗೋಪುರಪಟ್ಟಣವನ್ನು ಗೆದ್ದ ಗುಂಡಯ್ಯನ ಸಾಹಸವನ್ನು ನೆನೆಯಲಾಗಿದೆ. ಮೃತ ಗುಂಡಯ್ಯನ ತಂದೆಯನ್ನು ತಳಾರ ನೇವಯ್ಯನೆಂದು ವರ್ಣಿಸಲಾಗಿದೆ. ತಳಾರ ಎಂದರೆ ಸೇವಕ ಎಂಬ ಅರ್ಥವಿದೆ. ಆದ್ದರಿಂದ ಶಾಸನೋಕ್ತ ತಳಾರ ನೇವಯ್ಯನು ಗೋವಾ ಕದಂಬರ ಸಾಮಂತನಾಗಿ ಒಂದು ಮಂಡಲದ ಅಧಿಪತಿಯಾಗಿ ಆಳ್ವಕೆ ನಡೆಸುತ್ತಿದ್ದ ಎಂದೂ, ಕದಂಬ ಶಾಸ್ತದೇವನ ಗೋಪುರಪಟ್ಟಣದ ಮೇಲಿನ ದಾಳಿಯಲ್ಲಿ ನೇವಯ್ಯನ ಆಸೆಯಂತೆ ಆತನ ಮಗ ಗುಂಡಯ್ಯ ಭಾಗವಹಿಸಿ ಗೋಪುರಪಟ್ಟಣವನ್ನು ಗೆದ್ದು ವೀರಮರಣ ಹೊಂದಿದ ಎಂದು ಭಾವಿಸಬಹುದಾಗಿದೆ.

ಗೋವಾ ಕದಂಬರ ಆಳ್ವಕೆಯ ಆರಂಭಿಕ ಕಾಲದ ಲಿಪಿಲಕ್ಷಣವನ್ನು ಶಾಸನದ ಲಿಪಿಗಳು ಸಂಪೂರ್ಣವಾಗಿ ಹೋಲುವುದ ರಿಂದ ಶಾಸನದ ಕಾಲವನ್ನು ಕ್ರಿ.ಶ.10ನೇ ಶತಮಾನದ ಶಾಸನವೆಂದು ನಿರ್ಧರಿಸಬಹುದಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.

ಡಾ.ರಾಜೇಂದ್ರ ಕೇರ್ಕರ್ ಅವರು ಈ ಅಪರೂಪದ ಶಾಸನವನ್ನು ತಮ್ಮ ಗಮನಕ್ಕೆ ತಂದು ಸಂಶೋಧನೆಗೆ ಸಹಕರಿಸಿದ್ದಾರೆ ಎಂದಿರುವ ಪ್ರೊ.ಟಿ. ಮುರುಗೇಶಿ, ಶಾಸನದ ಪಠ್ಯವನ್ನು ಸಿದ್ಧಪಡಿಸುವಲ್ಲಿ, ಸಂಶೋಧಿಸುವಲ್ಲಿ ಹಾಗೂ ಅರ್ಥೈಸುವಲ್ಲಿ ಮೈಸೂರಿನ ಭಾರತೀಯ ಪುರಾತತ್ವಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಕರಾದ ಡಾ. ಮುನಿರತ್ನ ರೆಡ್ಡಿ, ಡಾ. ನಾಗರಾಜಪ್ಪ ಮತ್ತು ಆರ್ಕೆ ಮಣಿಪಾಲ್ ಇವರ ಸಹಕಾರವನ್ನು ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News