ಬೈಂದೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

Update: 2024-05-19 06:44 GMT

ಬೈಂದೂರು, ಮೇ 19: ಮನೆಯ ಗೇಟ್ ಮುಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಮುದ್ರುಮಕ್ಕಿ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಮುದ್ರುಮಕ್ಕಿ ಸಮೀಪದ ನಿವಾಸಿ ಕುರುಡಿ ಇರ್ಷಾದ್(52) ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಸುರಿದ ಗಾಳಿಮಳೆಗೆ ಹಡವಿನ ಕೋಣೆಯಿಂದ ಮುದ್ರುಮಕ್ಕಿಗೆ ತೆರಳುವ ಮಾರ್ಗದಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇರ್ಷಾದ್ ಮನೆಯೊಳಕ್ಕೆ ಸತ್ತುಹೋದ ಇಲಿಯನ್ನು ಹೊರಕ್ಕೆ ಬೀಸಾಡುವ ಸಲುವಾಗಿ ಇಂದು ಬೆಳಗ್ಗೆ ಗೇಟ್ ದಾಟಿ ಹೊರಕ್ಕೆ ಬಂದಿದ್ದು, ಈ ವೇಳೆ ಗೇಟ್ ಎದುರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದರೆನ್ನಲಾಗಿದೆ.

ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಅವರು ತೀವ್ರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬೈಂದೂರು ಮೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಇರ್ಷಾದ್ ಕುರುಡಿ, ಹೆಚ್ಚಾಗಿ ಮಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಶನಿವಾರವಷ್ಟೇ ಅವರು ಮಂಗಳೂರಿನಿಂದ ಮನೆಗೆ ಆಗಮಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ಇರ್ಷಾದ್ ಅವರ ಅಗಲುವಿಕೆಯಿಂದ ಬಡ ಕುಟುಂಬ ಕಂಗಾಲಾಗಿದೆ.

ಮೆಸ್ಕಾಂ ವಿರುದ್ಧ ತೀವ್ರ ಆಕ್ರೋಶ

ಹಡವಿನಕೋಣೆ ಮುದ್ರುಮಕ್ಕಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾಮರ್ ನ್ನು ತೆರವುಗೊಳಿಸಿ ಬೇರೆ ಕಡೆ ಸ್ಥಳಾಂತರಿಸುವಂತೆ ಸ್ಥಳೀಯರು ಈ ಹಿಂದೆ ಹಲವು ಬಾರಿ ಸ್ಥಳೀಯ ಗ್ರಾಪಂ ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಆದರೆ ಸಂಬಂಧಪಟ್ಟರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮೆಸ್ಕಾಂನ ಬೇಜವ್ದಾರಿತನದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೃತರದ್ದು ಬಡ ಕುಟುಂಬವಾಗಿದ್ದು ಅವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News