ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

Update: 2023-07-31 15:59 GMT

ಬೈಂದೂರು, ಜು.31: ಉಪ್ಪುಂದ ಮಡಿಕಲ್‌ನ ಕರ್ಕಿಕಳಿ ಎಂಬಲ್ಲಿ ಸುಮಾರು 200 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಇಂದು ಸಂಜೆ ವೇಳೆ ಸಂಭವಿಸಿದ ದೋಣಿ ದುರಂತದಲ್ಲಿ ಓರ್ವ ಮೀನುಗಾರ ಮೃತಪಟ್ಟು, ಇನ್ನೋರ್ವ ನೀರುಪಾಲಾಗಿದ್ದು, ಆರು ಮಂದಿ ಈಜಿ ದಡ ಸೇರಿ ಪಾರಾಗಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ನಾಗೇಶ್ ಖಾರ್ವಿ(29) ಎಂದು ಗುರುತಿಸಲಾಗಿದೆ. ಸತೀಶ್ ಖಾರ್ವಿ(31) ಎಂಬವರು ನೀರು ಪಾಲಾಗಿದ್ದು, ನಾಗೇಂದ್ರ ಖಾರ್ವಿ(29), ನಾಗೇಶ್ ಖಾರ್ವಿ (24), ದೇವೆಂದ್ರ ಖಾರ್ವಿ(25), ಅಣಪ್ಪ ಖಾರ್ವಿ(45), ಆದರ್ಶ ಖಾರ್ವಿ(20). ಸಚಿನ್ ಖಾರ್ವಿ(25) ಎಂಬವರು ಈಜಿ ದಡ ಸೇರಿದ್ದಾರೆ. ಇವರೆಲ್ಲರು ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳಾಗಿದ್ದಾರೆ.

ಸಚಿನ್ ಖಾರ್ವಿ ಮಾಲಿಕತ್ವದ ಮಾಸ್ತಿ ಮರ್ಲು ಚಿಕ್ಕು ಪ್ರಸಾದ ಹೆಸರಿನ ನಾಡದೋಣಿಯಲ್ಲಿ ಎಂಟು ಮಂದಿ ಇಂದು ಬೆಳಗ್ಗೆ 11 ಗಂಟೆಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆ ಹೊರಟಿದ್ದರು. ಮೀನುಗಾರಿಕೆ ಮುಗಿಸಿ ದೋಣಿ ದಡಕ್ಕೆ ಬರುತ್ತಿರುವಾಗ ಸಂಜೆ 4 ಗಂಟೆಗೆ ಸಮುದ್ರದ ಅಲೆಗೆ ಸಿಲುಕಿ ದೋಣಿ ಮುಗುಚಿ ಬಿತ್ತೆನ್ನಲಾಗಿದೆ.

ಈ ವೇಳೆ ದೊಣಿಯಲ್ಲಿದ್ದ ಎಂಟು ಮಂದಿ ಮೀನುಗಾರರು ನೀರಿಗೆ ಬಿದ್ದರು. ಇವರಲ್ಲಿ ಸತೀಶ್ ಖಾರ್ವಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಉಳಿದ ಏಳು ಮಂದಿ ಈಜಿ ದಡ ಸೇರುವ ವೇಳೆ ನಾಗೇಶ್ ಖಾರ್ವಿ ತೀವ್ರವಾಗಿ ಅಸ್ವಸ್ಥ ಗೊಂಡರೆನ್ನಲಾಗಿದೆ. ಇವರನ್ನು ಕೂಡಲೇ ಬೈಂದೂರು ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಾರಿ ಮಧ್ಯೆ ಅವರು ಮೃತಪಟ್ಟರೆಂದು ತಿಳಿದುಬಂದಿದೆ.

ನೀರು ಪಾಲಾದ ಸತೀಶ್ ಖಾರ್ವಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಆದರೆ ರಾತ್ರಿಯವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಪೊಲೀಸ್, ಅಗ್ನಿಶಾಮಕ ದಳ, ಕೋಸ್ಟಲ್ ಗಾರ್ಡ್, ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತಾ, ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮೊದಲಾದ ವರು ಆಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News