ಗೌರಿ-ಗಣೇಶ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಿ: ಉಡುಪಿ ಜಿಲ್ಲಾಡಳಿತ ಸೂಚನೆ

Update: 2024-08-20 15:14 GMT

ಉಡುಪಿ: ಪ್ರಸಕ್ತ ಸಾಲಿನ ಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿ ತರ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಮಟ್ಟವು ಮಾರ್ಪಟಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗು ವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಇತರೇ ಜಲಚರಗಳ ಜೀವಕ್ಕೆ ಆಪಾಯ ಉಂಟಾಗುತ್ತದೆ. ಜೊತೆಗೆ ಕಲುಷಿತ ನೀರಿನಿಂದ ಸಾರ್ವಜನಿಕ ಆರೋಗ್ಯಕ್ಕೂ ದಕ್ಕೆ ಉಂಟಾಗುತ್ತದೆ.

ಆದ್ದರಿಂದ ಉಚ್ಛ ನ್ಯಾಯಾಲಯದ ಆದೇಶ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ ಯಂತೆ ಸ್ವರ್ಣಗೌರಿ ಹಾಗೂ ವರಸಿದ್ದಿ ನಾಯಕ ಚತುರ್ಥಿ ಹಬ್ಬದ ಆಚರಣೆಯಿಂದ ಉಂಟಾಗುವ ಮಾಲಿನ್ಯದಿಂದ ನೈಸ ರ್ಗಿಕ ಜಲ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಇನ್ನು ಮುಂದೆ ಜಿಲ್ಲೆಯ ಯಾವುದೇ ಕೆರೆ, ಬಾವಿ, ಕಟ್ಟೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ವ್ಯಾಪಾರ ಲೈಸ್ಸನ್ ನೀಡಬಾರದು ಮತ್ತು ಲೈಸನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿ/ ಮಾರಾಟ ಮಾಡುವ ವ್ಯಕ್ತಿ/ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತಕ್ಷಣ ಜರುಗಿಸಲಾಗುವುದು.

ಕ್ರಮಕ್ಕೆ ಸೂಚನೆ: ಈಅಧಿಸೂಚನೆಯ ಅನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್, ಬಣ್ಣ ಲೇಪಿತ ವಿಗ್ರಹಗಳನ್ನು ಯಾವುದೇ ನದಿ, ಕಾಲುವೆ ಹಾಗೂ ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯಸಂಹಿತೆ ನಿಯಾಮನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು.

ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜನೆ ಮಾಡಬೇಕು.

ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‌ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿಕಸವನ್ನು ಪ್ರತ್ಯೇಕಿಸಿ, ಮೂರ್ತಿ ಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಡಳಿತ ಸೂಚನೆಗಳನ್ನು ನೀಡಿದೆ.

ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿ ಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆ ಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸಬೇಕು ಹಾಗೂ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕಗಳ ಬಳಕೆಯನ್ನು ನಿಷೇಧಿಲಾಗಿದೆ.

ಈ ಅಧಿಸೂಚನೆಯನ್ನು ಜಿಲ್ಲೆಯ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ಹೊರಡಿಸಲಾಗಿದ್ದು, ಗೌರಿ ಹಾಗೂ ಗಣೇಶ ಚರ್ತುಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲೆಯ ನಾಗರಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News