ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಸರ ಸುಲಿಗೆ
ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಸರವನ್ನು ಕಿಟಕಿ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಅ.17ರಂದು ರಾತ್ರಿ ಕುಮಟಾದ ನಿರ್ಮಲಾ ವಿ.(59) ಎಂಬವರು ಬೆಂಗಳೂರು-ಕಾರವಾರ ರೈಲಿನಲ್ಲಿ ಚೆನ್ನರಾಯಪಟ್ಟಣದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿದ್ದು, ಅ.18ರಂದು ಬೆಳಗಿನ ಜಾವ ರೈಲು ಬಿಜೂರು ರೈಲ್ವೆ ಸ್ಟೇಷನ್ ಸಮೀಪ ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ನಿರ್ಮಲಾ ಕಿಟಕಿಯಲ್ಲಿ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದಿದ್ದನು.
ಆ ವೇಳೆ ನಿರ್ಮಲಾ ಎಚ್ಚರಗೊಂಡು ಸರವನ್ನು ಎಳೆಯದಂತೆ ಹಿಡಿದುಕೊಂಡಾಗ ಸರ ತುಂಡಾಗಿ ಸರದ ಒಂದು ಭಾಗ ನಿರ್ಮಲಾ ಅವರ ಕೈಯಲ್ಲಿ ಉಳಿದಿದ್ದು ಇನ್ನೊಂದು ಭಾಗದ ಸುಮಾರು 15 ಗ್ರಾಂನಷ್ಟು ಚಿನ್ನದ ತುಂಡನ್ನು ಆರೋಪಿ ಎಳೆದುಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಚಿನ್ನದ ಮೌಲ್ಯ 1,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.