ದ್ವೇಷ ಭಾಷಣವನ್ನೇ ಯಶಸ್ಸಿನ ಮೆಟ್ಟಲಾಗಿ ಮಾಡಿಕೊಂಡ ಚೈತ್ರ ಕುಂದಾಪುರ

Update: 2023-09-14 06:42 GMT

ಬೈಂದೂರು, ಸೆ.13: ಕಳೆದ ವಿಧಾನಸಭೆ ಚುನಾವಣೆ ವೇಳೆ ಬೈಂದೂರು ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ನೀಡಿಕೆ ವಿಚಾರ ದೊಡ್ಡ ಚರ್ಚೆಯ ವಿಷಯವಾದಾಗ ಇದನ್ನು ಅತ್ಯಂತ ಜಾಣತನದಿಂದ ಬಳಸಿಕೊಂಡು ಟಿಕೇಟ್ ಆಕಾಂಕ್ಷಿಯಾಗಿದ್ದ ಕೋಟ್ಯಾಧಿಪತಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ನಂಬಿಸಿ, ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.ಗಳನ್ನು ಪಡೆದು ವಂಚಿಸಿದ ಬಹುಕೋಟಿ ಡೀಲ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮೂಲತ: ಸಂಘಪರಿವಾರದ ಓರ್ವ ಸಕ್ರಿಯ ಕಾರ್ಯಕರ್ತೆ.

ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾದ ಅವರು ವಿದ್ಯಾಭ್ಯಾಸದ ಬಳಿಕ ಎಬಿವಿಪಿಯಲ್ಲಿ ಜವಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಕೆಲ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಮಾಧ್ಯಮದಿಂದ ಹೊರಬಂದ ಬಳಿಕ ಪ್ರಚೋದನಕಾರಿ, ಉಗ್ರ ಭಾಷಣಗಳ ಮೂಲಕ ಕೋಮುಗಳ ನಡುವೆ ಸಾಮರಸ್ಯ ಕದಡುವ ಮಾತನಾಡಿ ಒಂದು ಕೋಮಿನವರನ್ನು ಎತ್ತಿಕಟ್ಟುವ ಬಗ್ಗೆ ಆರೋಪಗಳಿದ್ದು ಈ ಬಗ್ಗೆ ಪ್ರಕರಣಗಳು ಕೂಡ ದಾಖಲಾಗಿರುವ ಮಾಹಿತಿಗಳಿವೆ.

ಈತನ್ಮದ್ಯೆ ಕಳೆದ ಕೆಲ ವರ್ಷಗಳಿಂದ ತಾನು ಪ್ರಖರ ವಾಗ್ಮಿ, ಹಿಂದೂ ಕಾರ್ಯಕರ್ತೆ ಎಂಬ ಸೋಗಿನಲ್ಲಿ ಭಾಷಣಗಳನ್ನು ಮಾಡುತ್ತಿದ್ದ ಈಕೆ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಒಂದಷ್ಟು ಸಮಸ್ಯೆಗಳನ್ನು ಮಾಡಿಕೊಂಡು ಸಂಘಟನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾದ ಬಳಿಕ ಉತ್ತರ ಕರ್ನಾಟಕದ ಒಂದಷ್ಟು ಕಡೆ ಭಾಷಣಕಾರ್ತಿಯಾಗಿ ತೆರಳಿ ಅಲ್ಲಿಗೆ ಸೀಮಿತವಾಗಿದ್ದರು.

ಭಾಷಣಗಾರ್ತಿಯಾಗಿರುವ ಚೈತ್ರಾ ಕುಂದಾಪುರ, ಉತ್ತರ ಕರ್ನಾಟಕ ಭಾಗಗಳಲ್ಲಿ ಸಂಘ ಪರಿವಾರ ಆಯೋಜಿಸುವ ಪ್ರತಿಭಟನಾ ಸಭೆಯಲ್ಲಿ ಪ್ರಮುಖ ಭಾಷಣಗಾರ್ತಿಯಾಗಿ ಹೋಗಿ ಮುಸ್ಲಿಂ ಸಮುದಾಯದ ಬಗ್ಗೆ ತಮ್ಮ ಭಾಷಣಗಳಲ್ಲಿ ಕೆಟ್ಟದಾಗಿ ದ್ವೇಷ ಕಾರುತ್ತಾ, ಮುಗ್ದ ಜನರಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದ ಆರೋಪಗಳಿವೆ.

ಗೋವಿಂದ ಪೂಜಾರಿ: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮುನ್ನ ಕೆಲ ತಿಂಗಳ ಮೊದಲೇ ಹುಟ್ಟೂರಿಗೆ ಬಂದು ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿ ಅವರ ಕಾರ್ಯಕ್ರಮದಲ್ಲಿ ಚೈತ್ರ ಮೊದಲ ಬಾರಿ ಭಾಗವಹಿಸಿದ್ದು ಇದೇ ವರ್ಷದ ಜನವರಿಯಲ್ಲಿ.

ಬೈಂದೂರು ಕ್ಷೇತ್ರದ ಮರವಂತೆಯಲ್ಲಿ ನಡೆದ ಮನೆ ಹಸ್ತಾಂತರ ಕಾರ್ಯಕ್ರಮವೊಂದರಲ್ಲಿ ‘ಸೂಟುಬೂಟಿನ ಮೇಲೆ ಕೇಸರಿ ಶಾಲು ಹಾಕಿ ಕಾರ್ಯಕರ್ತರ ಜೊತೆ ನಾನಿದ್ದೇನೆ ಎಂಬ ದಾನಿ ಗೋವಿಂದ ಪೂಜಾರಿ’ ಎಂದು ಅವರನ್ನು ಹಾಡಿಹೊಗಳಿದ್ದರು. ಇದೇ ಕಾರ್ಯಕ್ರಮದಲ್ಲಿ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಾಶ್ರೀ ಸ್ವಾಮೀ ಕೂಡ ಭಾಗವಹಿಸಿದ್ದರು.

ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆಯೇ ಹಾಲಿ ಶಾಸಕರ ಸಹಿತ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಇದರಲ್ಲಿ ಒಂದು ಹೆಸರು ಗೋವಿಂದ ಬಾಬು ಪೂಜಾರಿಯದ್ಧು ಕೂಡ ಆಗಿದ್ದು ತಮ್ಮದೆ ಕಾರ್ಯವೈಖರಿಯಲ್ಲಿ ಕ್ಷೇತ್ರಾದ್ಯಂತ ಕೆಲಸವನ್ನು ಕೂಡ ಪ್ರಾರಂಭಿಸಿದ್ದರು.

ಆತ್ಮೀಯ ವಲಯದಲ್ಲಿ ‘ಹೆಸರು ಅಂತಿಮವಾಗಿದೆ’ ಎಂದು ಅವರು ಹೇಳುತಿದ್ದ ಮಾತುಗಳು ಅಂದು ಕ್ಷೇತ್ರದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ಅಂತಿಮವಾಗಿ ಹೈಕಮಾಂಡ್ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿದಾಗ (ಗುರುರಾಜ್ ಗಂಟಿಹೊಳೆ) ಗೋವಿಂದ ಪೂಜಾರಿ ಅವರು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಇದೇ ಸಮಯ ಅವರನ್ನು ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿತ್ತು.

ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿ ವಿಜಯಿಯಾಗಿ 2-3 ತಿಂಗಳ ನಂತರ ಗೋವಿಂದ ಬಾಬು ಪೂಜಾರಿ ಹೆಸರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಗೋವಿಂದ ಪೂಜಾರಿ ನಿರಾಕರಿಸಿದ್ದರು. ಮುಂದುವರಿದ ವಿದ್ಯಾಮಾನದಲ್ಲಿ ಗೋವಿಂದ ಪೂಜಾರಿ ಆಪ್ತ ಪ್ರಸಾದ್ ಹಾಗೂ ಚೈತ್ರ ಕುಂದಾಪುರ ಮಾತನಾಡಿದ್ದರೆನ್ನಲಾದ ಆಡಿಯೋ ಕೂಡಾ ವೈರಲ್ ಆಗಿತ್ತು.

ಇಡೀ ಪ್ರಕರಣದಲ್ಲಿ ಮುಖ್ಯ ಪಾತ್ರದಾರಿಯಾಗಿದ್ದ ಸೋಕಾಲ್ಡ್ ಪ್ರಚಾರಕ ವಿಶ್ವನಾಥ್ ಜೀ ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ. ಅವರ ಅಂತಿಮ ದರ್ಶನ ಮಾಡುವುದು ಕೂಡ ಕಷ್ಟ ಸಾಧ್ಯ ಎಂಬಂತೆ ಚೈತ್ರಾ ಹಾಗೂ ಪ್ರಸಾದ್ ನಡುವೆ ಸಂಭಾಷಣೆ ನಡೆದು ಅದರಲ್ಲಿ ಎರಡನೇ ಆರೋಪಿ ಗಗನ್ ಕಡೂರು ಹಾಗೂ ಸ್ವಾಮೀಜಿ ಹೆಸರು ಸಹ ಪ್ರಸ್ತಾಪವಾಗಿತ್ತು.

ಈ ಎಲ್ಲಾ ಬೆಳವಣಿಗೆ ಗಮನಿಸಿದ ನಂತರ ಗೋವಿಂದ ಪೂಜಾರಿ ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಎಫ್‌ಐಆರ್ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಇದೀಗ ಕಾನೂನುಕ್ರಮಕ್ಕೆ ಮುಂದಾಗಿದ್ದಾರೆ.

ಐಷಾರಾಮಿ ಜೀವನ: ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನ ಚೈತ್ರಾ ದುಬಾರಿ ಬೆಲೆಯ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದುದು ಬಯಲಾಗಿದೆ. ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News