ಮಕ್ಕಳ ಕ್ಯಾನ್ಸರ್ ಜಾಗೃತಿ ಮಾಸಾಚರಣೆ: ಚಿನ್ನದ ಬಣ್ಣದಲ್ಲಿ ಬೆಳಗಿದ ಕೆಎಂಸಿ ಆಸ್ಪತ್ರೆ ಪರಿಸರ
ಉಡುಪಿ, ಸೆ.14: ಬಾಲ್ಯ ಕಾಲದ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ ಅಂಗವಾಗಿ ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಪರಿಸರಗಳನ್ನು ಚಿನ್ನದ ಬಣ್ಣದಿಂದ ಬೆಳಗಿಸಲಾಯಿತು. ಸೆಪ್ಟೆಂಬರ್ ತಿಂಗಳು ಅಂತರ್‌ರಾಷ್ಟ್ರೀಯ ಬಾಲ್ಯಕಾಲದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ಈ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇಂದು ಆಕ್ಸೆಸ್‌ಲೈಫ್ ಅಸಿಸ್ಟೆಂಟ್ ಫೌಂಡೇಷನ್ ಜೊತೆಗೆ ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಬಾಲ್ಯಕಾಲದ ಕ್ಯಾನ್ಸರ್ ಗುಣಪಡಿಸುವ ಸಾಮರ್ಥ್ಯ ಮತ್ತು ಅವಕಾಶದ ಕುರಿತು ಜಾಗೃತಿ ಮೂಡಿಸಲು ಮಣಿಪಾಲದ ಕಾರಂಜಿಯನ್ನು ಚಿನ್ನದ ಬಣ್ಣದಿಂದ ಬೆಳಗಿಸಿತು.
ಕೆಎಂಸಿಯ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಕೆ. ವಾಸುದೇವ ಭಟ್ ಈ ಸಂದರ್ಭದಲ್ಲಿ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಸುಮಾರು 78,000 ಮಕ್ಕಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಇಷ್ಟೊಂದು ಮಕ್ಕಳು ಸಾಯಲು ಹಾಗೂ ತ್ವರಿತ ಚಿಕಿತ್ಸೆಯಿಂದ ಗುಣಮುಖ ರಾಗಲು ಇರುವ ಪ್ರಮುಖ ಅಡ್ಡಿ, ತಡವಾದ ರೋಗ ನಿರ್ಣಯ, ತಜ್ಞ ವೈದ್ಯರನ್ನು ಸಂಪರ್ಕಿಸಲು ಆಗುವ ವಿಳಂಬ, ಕ್ಯಾನ್ಸರ್ ಕುರಿತಂತೆ ಜನರಲ್ಲಿ ಇರುವ ಮೂಢನಂಬಿಕೆಗಳು, ಸಂಪನ್ಮೂಲಗಳ ಕೊರತೆ ಮತ್ತು ಇತರ ಸಂಬಂಧಿತ ಸೋಂಕುಗಳು ಕಾರಣವಾಗಿವೆ ಎಂದು ವಿವರಿಸಿದರು.
ಬಾಲ್ಯದ ಕ್ಯಾನ್ಸರ್‌ನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿ ತಜ್ಞ ವೈದ್ಯರ ತಂಡ ದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ರೋಗವನ್ನು ಸಂಪೂರ್ಣ ವಾಗಿ ಗುಣಪಡಿಸಲು ಸಾಧ್ಯವಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿ ಸಮಿತಿ ಸ್ವಯಂಸೇವಕರು ಮತ್ತು ಇತರರು ಭಾಗವಹಿಸಿದ್ದರು.ಇದಕ್ಕೂ ಮುನ್ನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಲ್ಲಿ (ಎಂಐಸಿ) ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಕೆಎಂಸಿ ಸಾಂಸ್ಕೃತಿಕ ಸಮಿತಿಯ ಸದಸ್ಯರಿಂದ ಜಾಗೃತಿ ಕುರಿತಾದ ಕಿರುನಾಟಕ ಮತ್ತು ಮನರಂಜನಾ ಕಾರ್ಯಕ್ರಮ ನಡೆದವು.