ಬಿ.ಕೆ.ಹರಿಪ್ರಸಾದ್‌ಗೆ ಸಮುದಾಯ ಬೆಂಬಲ: ಪ್ರಣವಾನಂದ ಸ್ವಾಮೀಜಿ

Update: 2023-07-29 15:28 GMT

ಬಿ.ಕೆ.ಹರಿಪ್ರಸಾದ್‌

ಉಡುಪಿ, ಜು.29: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿರುವ ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ, ಈ ವಿಷಯದಲ್ಲಿ ಇಡೀ ಸಮುದಾಯ ಅವರ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ಆಗಸ್ಟ್ 2ರಂದು ಹರಿಪ್ರಸಾದ್ ಅವರನ್ನು ಪಕ್ಷದ ವರಿ ಷ್ಠರು ಹೊಸದಿಲ್ಲಿಗೆ ಕರೆದಿದ್ದು, ಅಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆ ಇದೆ. ಸಿಗದಿದ್ದರೆ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.

ಬಿಲ್ಲವ ಸಮುದಾಯ ಯಾವತ್ತೂ ಬಿ.ಕೆ.ಹರಿಪ್ರಸಾದ್ ಬೆಂಬಲಕ್ಕಿದೆ. ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗೂ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ಸ್ವಾಮೀಜಿ, ಸುಮಾರು 19 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾ ಗಿದ್ದ ಹರಿಪ್ರಸಾದ್ ಅವರ ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ ಅಪಾರ. ಪಕ್ಷಕ್ಕೆ ಐದು ದಶಕಗಳ ಅವರ ಸೇವೆಯನ್ನು ಕಡೆಗಣಿಸಿದರೆ ಬಿಲ್ಲವ ಸಮಾಜ ಸುಮ್ಮನಿರುವುದಿಲ್ಲ ಎಂದರು.

ಕರಾವಳಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವ, ಈಡಿಗ ಸಮಾಜವನ್ನು ಒಟ್ಟುಗೂಡಿಸುವ ಕೆಲಸವನ್ನು ನಾವೀಗ ಮಾಡುತಿದ್ದೇವೆ. ಒಕ್ಕಲಿಗ, ಲಿಂಗಾಯತ ಸಮುದಾಯದಂತೆ ಬಿಲ್ಲವ ಸಮಾಜವನ್ನು ಇನ್ನೊಂದು ರಾಜಕೀಯ ಶಕ್ತಿಯನ್ನಾಗಿ ಬೆಳೆಸುವ ಪ್ರಯತ್ನದಲ್ಲಿದ್ದೇವೆ. ಈ ಸಮಾಜವನ್ನು ಯಾವುದೇ ರಾಜಕೀಯ ಪಕ್ಷ ಕಡೆಗಣಿಸಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆ.27ಕ್ಕೆ ಚಿಂತನ ಶಿಬಿರ: ಆಗಸ್ಟ್ 27ರಂದು ಉಡುಪಿ ಜಿಲ್ಲೆಯ ಬಿಲ್ಲವ ಸಮಾಜದ ಚಿಂತನ ಶಿಬಿರವನ್ನು ಉಡುಪಿಯ ನಾರಾಯಣಗುರು ಸಭಾಭವನ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಚಂದ್ರಶೇಖರ ಕಾಪು, ರಮೇಶ್ ಪೂಜಾರಿ, ಜಯ ಪೂಜಾರಿ, ವಿಜಯಕುಮಾರ್, ಬಾಲಚಂದ್ರ, ರಾಮಣ್ಣ ಪೂಜಾರಿ, ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News