ಜಾಗೃತ ನಾಗರಿಕರಿಂದ ಮಾತ್ರ ದೇಶ, ಸಂವಿಧಾನ ಉಳಿಸಲು ಸಾಧ್ಯ: ಡಾ.ಜಯಪ್ರಕಾಶ್ ಶೆಟ್ಟಿ
ಉಡುಪಿ, ಸೆ.4: ಜಾಗೃತ ನಾಗರಿಕರಿಂದ ಮಾತ್ರ ನಮ್ಮ ದೇಶ ಮತ್ತು ಸಂವಿಧಾನವನ್ನು ಉಳಿಸಲು ಸಾಧ್ಯವಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಜಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಶ್ರೀಸಾಮಾನ್ಯರ ಆಯೋಗ ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇವರ ಜಂಟಿ ಆಶ್ರಯದಲ್ಲಿ ರವಿವಾರ ಆಯೋಜಿಸಲಾಗಿದ್ದ ಶ್ರೀಸಾಮಾನ್ಯರ ಸಮಾವೇಶದಲ್ಲಿ ಅವರು ದಿಕ್ಸೂಚಿ ಮಾತುಗಳನ್ನಾಡಿದರು.
ಸಂವಿಧಾನ ಭಾರತದ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವಂತದ್ದು. ಇದು ಇಲ್ಲಿನ ವಿವಿಧ ಧರ್ಮ, ಭಾಷೆ, ಜಾತಿಯ ಎಲ್ಲ ಜನರನ್ನು ಒಳಗೊಳ್ಳುತ್ತದೆ. ಆದರೆ ಇಂದು ವಿವಿಧ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದು, ಒಳ್ಳೆಯವರ ಮೌನವೇ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಎಲ್ಲಿಯಾದರು ಅನ್ಯಾಯ ಕಂಡು ಬಂದಾಗ ದನಿ ಎತ್ತುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಒಂದು ವೇಳೆ ಅದನ್ನು ನಾವು ಮಾಡದೇ ಇದ್ದಲ್ಲಿ ಮುಂದೆ ನಮಗೆ ಅನ್ಯಾಯವಾದಾಗ ಯಾರೂ ಇರುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಶ್ರೀಸಾಮಾನ್ಯರ ಆಯೋಗ ಮತ್ತು ಕಥೊಲಿಕ್ ಸಭಾ ಸಂಘಟನೆಗಳು ಎರಡನೇ ಸಾಲಿನ ನಾಯಕತ್ವ ವನ್ನು ಬೆಳೆಸುವುದರೊಂದಿಗೆ ಮುಂಬರುವ ಚುನಾವಣೆಗಳಿಗೆ ಸಿದ್ದವಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸು ವಲ್ಲಿ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.
ನ್ಯಾಯವಾದಿ ಮೆಲ್ವಿನ್ ಡಿ’ಸೋಜಾ ಶಿರ್ವಾ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರೆ, ಶ್ರೀಸಾಮಾನ್ಯರ ಆಯೋಗದ ಆಧ್ಯಾತ್ಮಿಕ ನಿರ್ದೇಶಕ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಆಯೋಗದ ಉದ್ದೇಶಗಳನ್ನು ವಿವರಿಸಿದರು.
ಶಿಕ್ಷಣದ ಉನ್ನತಿಗಾಗಿ ಶ್ರಮಿಸುವ ಉತ್ತಮ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಸಿಗುವಂತಾಗಲು ಶಿಕ್ಷಕರು ಮತ್ತು ಪದವೀಧರರನ್ನು ಎಂಎಲ್‌ಸಿ ಚುನಾವಣೆಗೆ ಹೆಸರು ನೋಂದಾಯಿಸುವಂತೆ ಜಾಗೃತಿ ಮೂಡಿಸಲು ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಇದರ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ ಕಥೊಲಿಕ್ ಸಭೆಯ ಪದಾಧಿಕಾರಿಗಳನ್ನು ಕೋರಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್‌ನ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಸಾಮಾನ್ಯರ ಆಯೋಗದ ನಿರ್ದೇಶಕ ಡಾ. ಜೆರಾಲ್ಡ್ ಪಿಂಟೊ ಹಾಗೂ ಕಥೊಲಿಕ್ ಸಭಾ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ ಗುಂಪು ಚರ್ಚೆಯ ಮೂಲಕ ಮುಂದಿನ ಕ್ರಿಯಾ ಯೋಜನೆಯ ಸಿದ್ದಪಡಿಸಲು ಸಹಕರಿಸಿದರು. ಕ್ರಿಯಾಯೋಜನೆಯಲ್ಲಿ ಸಿದ್ದಗೊಂಡ ಸಲಹೆಗಳನ್ನು ಸೆ.10ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡಿಸಿ ಅಂತಿಮಗೊಳಿಸಲಾಗುತ್ತದೆ.
ಕಾರ್ಯಕ್ರಮದ ಸಂಚಾಲಕರಾದ ಮೇರಿ ಡಿ’ಸೋಜಾ ಸ್ವಾಗತಿಸಿ, ಕಥೊಲಿಕ್ ಸಭಾ ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಐರಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.