ಸರಕಾರಿ ಶಾಲೆ ಉಳಿಯದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ: ಡಾ.ನಿರಂಜನಾರಾಧ್ಯ

Update: 2023-08-28 14:34 GMT

ಬೈಂದೂರು, ಆ.28: ಎರಡು ದಶಕಗಳ ಹಿಂದೆ ಜಾರಿಗೊಂಡ ಶಾಲಾಭಿವೃದ್ಧಿ ಸಮಿತಿಯು ಸಂವಿಧಾನಾತ್ಮಕವಾಗಿ, ಶಾಸನಬದ್ಧವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಹಲವು ಸರಕಾರಿ ಶಾಲೆಗಳಿಗೆ ಪುನಶ್ಚೇತನ ಸಿಕ್ಕಿದೆ. ರಾಜ್ಯದಲ್ಲಿ ಶಾಲೆಗಳ ಉಳಿವಿಗೆ ಎಸ್‌ಡಿಎಂಸಿ ಕಾರಣವಾಗಿದೆ. ಹಾಗಾಗಿ ಇದರ ಪದಾಧಿಕಾರಿಗಳು ಜವಬ್ದಾರಿ ಅರಿತು ಕೆಲಸ ಮಾಡಬೇಕೆಂದು ಅಭಿವೃದ್ಧಿ ಶಿಕ್ಷಣ ತಜ್ಞ, ಸಮನ್ವಯ ವೇದಿಕೆಯ ಮಹಾಪೋಷಕ ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬೈಂದೂರು ತಾಲೂಕು ವತಿಯಿಂದ ಉಪ್ಪುಂದದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಾಧಕ ಎಸ್‌ಡಿಎಂಸಿ ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಎಸ್‌ಡಿಎಂಸಿ ಸದಸ್ಯರಿಗೆ ಸಾಮರ್ಥ್ಯವರ್ಧನಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರಕಾರಿ ಶಾಲೆ ಉಳಿಯದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಹಾಗಾಗಿ ಶಾಲೆಗಳ ಬಾಗಿಲು ಮುಚ್ಚುವ ಕೆಲಸವಾಗಬಾರದು. ಸಮಾಜದಲ್ಲಿನ ಸಾಮುದಾಯಿಕ ಶಾಲೆಗಳು ಉಳಿದು ರಾಜ್ಯದ ಸಾಂಸ್ಕೃತಿಕತೆ ಬೆಳೆಯಲು ಇದು ಪೂರಕವಾಗುತ್ತದೆ. ಸರಕಾರಿ ಶಿಕ್ಷಣ ಸಂಸ್ಥೆ ಬೆಳೆಯಲು ಸರಕಾರ ಅಂತಹ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಜೊತೆಗೆ ಅಧಿಕಾರಿಗಳ ಕಾರ್ಯನ್ಮೋಖ ನಡೆ ಅಗತ್ಯ. ಸರಕಾರಿ ಶಾಲೆ ಹಂತಹಂತವಾಗಿ ಮುನ್ನಡೆಸುವಲ್ಲಿ ಹರೇಕಳ ಹಾಜಬ್ಬರ ಕಾರ್ಯ ಶ್ಲಾಘನೀಯವಾಗಿದ್ದು ಇದು ಎಲ್ಲರಿಗೂ ಮಾದರಿ ಎಂದರು.

ಈ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ. ಅವರನ್ನು ಗೌರವಿಸಲಾಯಿತು. ಐದು ತಾಲೂಕುಗಳ ಸಾಧಕ ಎಸ್‌ಡಿಎಂಸಿ ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸ ಲಾಯಿತು. ಉಪ್ಪುಂದ ಸರಕಾರಿ ಪದವು ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜು ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್ ಜಿ ಗಂಗವಾಡಿ, ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ರಾಜ್ಯ ಕಾರ್ಯದರ್ಶಿ ಪಾರ್ವತಿ ಜಿ.ಎಸ್. ದಾವಣಗೆರೆ, ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಮನ್ವಯಾಧಿಕಾರಿ ರಾಮಕೃಷ್ಣ ದೇವಾಡಿಗ, ಉಪ್ಪುಂದ ಶಿಕ್ಷಣ ಪ್ರೇಮಿ ಪ್ರಕಾಶ್ ಭಟ್, ಅಮಾಸೆಬೈಲು ಸರಕಾರಿ ಶಾಲೆ ದತ್ತು ಸ್ವೀಕರಿಸಿದ ದಾನಿ ಶಂಕರ ಐತಾಳ್, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆಯ ಬೈಂದೂರು ಕಾರ್ಯದರ್ಶಿ ಜ್ಯೋತಿ ಜಯರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿದರು. ಬೈಂದೂರು ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಸುಮಾ ಆಚಾರ್ಯ ಉಪ್ರಳ್ಳಿ ಸನ್ಮಾನ ಪತ್ರ ವಾಚಿಸಿದರು. ರಾಘವೇಂದ್ರ ಗಾಣಿಗ ಅರೆಶಿರೂರು ವಂದಿಸಿದರು. ದಿನೇಶ್ ಆಚಾರ್ಯ ಉಳ್ಳೂರು ಕಾರ್ಯಕ್ರಮ ನಿರೂಪಿಸಿದರು.

‘ಸರಕಾರಿ ಶಾಲೆಗಳನ್ನು ಉನ್ನತೀಕರಿಸಲು ರಾಕೇಟ್ ಸೈನ್ಸ್ ಬೇಕಿಲ್ಲ. ರಾಜಕೀಯ ಇಚ್ಚಾಶಕ್ತಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೂಡಿಕೆ ಮಾಡಿಸಬೇಕು. ಸ್ವಾತಂತ್ರ್ಯ ಪೂರ್ವ-ನಂತರದಿಂದಲೂ ಸಮಾನ ಶಿಕ್ಷಣ ಬಗ್ಗೆ ಹೋರಾಟ ನಡೆದಿದೆ. 76ವರ್ಷ ಕಳೆದರೂ ವ್ಯವಸ್ಥೆಯಲ್ಲಿ ನಿರೀಕ್ಷಿತ ಬದವಣೆಯಾಗಿಲ್ಲ. ಜಾತಿ, ಧರ್ಮ, ಲಿಂಗ, ಹುದ್ದೆ ಮೀರಿ ಶಿಕ್ಷಣವು ಪ್ರತಿಯೊಬ್ಬರಿಗೆ ಸಿಗಬೇಕೆಂಬ ಕಲ್ಪನೆಯ ಹೋರಾಟದ ನಡುವೆ ಸಚಿವರು ನೀಡಿದ ಸರಕಾರಿ ಶಾಲೆಗಳ ವಿಲೀನ ಹೇಳಿಕೆ ಸರಿಯಲ್ಲ. ಸರಕಾರಿ ಶಾಲೆಗೆ ವಿದ್ಯಾರ್ಥಿಗಳು ಬಾರದಿರಲು ಕಾರಣ ವೇನೆಂಬುದನ್ನು ಸರಕಾರ, ಅಧಿಕಾರಿಗಳು ಪರಾಮರ್ಷಿಸಬೇಕು. ವಿದ್ಯಾರ್ಥಿ ಗಳು, ಪೋಷಕರಿಗೆ ಭರವಸೆ ನೀಡಬೇಕು’

-ಪ್ರೊ.ಡಾ.ನಿರಂಜನಾರಾಧ್ಯ ವಿ.ಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News