ಉಡುಪಿ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಡೆಂಗಿ; ವಿಶೇಷ ಆದ್ಯತೆಗೆ ಆಗ್ರಹ
ಉಡುಪಿ, ಸೆ.13: ಉಡುಪಿ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ವ್ಯಾಪಿಸುತಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಡೆಂಗಿ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಉಡುಪಿ ತಾಪಂ ಸಭಾಂಗಣದಲ್ಲಿ ಇಂದು ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಳೆದ ಆಗಸ್ಟ್ ತಿಂಗಳಲ್ಲಿ ನೂರಕ್ಕೂ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಅಲ್ಲಲ್ಲಿ ನೀರು ನಿಂತಿರುವ ಪ್ರದೇಶ ಗಳನ್ನು ಶುಚಿಗೊಳಿಸುವ ಬಗ್ಗೆ ಈಗಾಗಲೇ ನಗರಸಭೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದರು.
ತ್ಯಾಜ್ಯ ವಿಲೇವಾರಿ ನೈರ್ಮಲ್ಯದಲ್ಲಿ ಮುಖ್ಯ ಪಾತ್ರ ವಹಿಸುವ ಕಾರಣ ಈ ಬಗ್ಗೆ ಗ್ರಾಪಂ ಮಟ್ಟದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಪಂ ಪಿಡಿಓ ಜತೆ ಈ ಬಗ್ಗೆ ಮಾತುಕತೆ ನಡೆಸಲಾ ಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಶೇ.40ರಷ್ಟು ಮಂದಿಯಲ್ಲಿ ಈಗಾಗಲೇ ಆಯುಷ್ಮಾನ್ ಕಾರ್ಡ್ ಇದೆ. ಇಲ್ಲದವರು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿದರೆ ಮಾಡಿಕೊಡಲಾಗುವುದು ಎಂದು ಆರೋಗ್ಯಾಧಿಕಾರಿ ತಿಳಿಸಿದರು.
ಶಿಕ್ಷಕರ ಕೊರತೆಯಿಂದ ಶಾಲೆಗಳು ಮುಚ್ಚುವಂತಾಗಬಾರದು. ಈ ಬಗ್ಗೆ ಶಿಕ್ಷಣ ಇಲಾಖೆಯವರು ಪರಿಶೀಲನೆ ನಡೆಸಿ ಶಿಕ್ಷಕರ ನೇಮಕಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಬೇಕಿರುವ ಅಗತ್ಯ ನೆರವು ನೀಡಲು ತಾನು ಸಿದ್ಧ ಎಂದು ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಸಿಬ್ಬಂದಿ ಕೊರತೆ ಇದ್ದರೆ ಗಮನಕ್ಕೆ ತನ್ನಿ. ಅಭಿವೃದ್ಧಿ ಚಟುವಟಿಕೆಗಳಿಗೆ ಸಿಬಂದಿ ಕೊರತೆಯ ಕಾರಣ ನೀಡುವ ಬದಲು ಯಾವ ಇಲಾಖೆಯಲ್ಲಿ ಎಷ್ಟು ಸಿಬಂದಿ ಕೊರತೆ ಇದೆ ಎಂಬ ಬಗ್ಗೆ ವಿವರ ನೀಡಿದರೆ ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಶಿಕ್ಷಣ, ಆರೋಗ್ಯ ಸಹಿತ ಯಾವುದೇ ವಿಚಾರದಲ್ಲಿ ತಾಂತ್ರಿಕ ಕಾರಣಗಳಿಂದ ಜನರಿಗೆ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಕಾಪು ಶಾಸಕರು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಆಡಳಿತಾಧಿಕಾರಿ ರವೀಂದ್ರ, ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್ ಥೋಮಸ್ ಉಪಸ್ಥಿತರಿದ್ದರು.