ಧರ್ಮದ ಹೆಸರಿನಲ್ಲಿ ವಿಭಜಿಸಿ ಕಾರ್ಮಿಕರಿಗೆ ಅನ್ಯಾಯ: ಬಿ.ಎಂ.ಭಟ್ ಆರೋಪ
ಉಡುಪಿ, ಆ.12: ಶ್ರಮ ವಹಿಸಿ ಕೆಲಸ ಮಾಡುವವರಿಗೆ ದುಡಿಮೆಯೇ ಧರ್ಮವಾಗಿದೆ. ಆದರೆ ದುಡಿಯುವ ವರ್ಗವನ್ನು ದುಡಿಸುವ ವರ್ಗದವರು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಅನ್ಯಾಯ, ಮೋಸ ಮಾಡುತ್ತಿದೆ ಎಂದು ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್‌ನ ಉಪಾಧ್ಯಕ್ಷ ಬಿ.ಎಂ.ಭಟ್ ಆರೋಪಿಸಿದ್ದಾರೆ.
ಕಾರ್ಮಿಕರ ಮೂರು ವರ್ಷಗಳಿಂದ ಬಾಕಿ ಇರುವ ಕಾರ್ಮಿಕರ ಕನಿಷ್ಟ ಕೂಲಿ, ತುಟ್ಟಿಭತ್ಯೆ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಇಂದು ಉಡುಪಿ ಅಂಬಲಪಾಡಿಯ ಭಾರತ್ ಬೀಡಿ ಕಂಪನಿಯ ಮುಂದೆ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಬೀಡಿ ಕಾರ್ಮಿಕರ ಒಕ್ಕೂಟ ಬೀಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ನೀಡಬೇಕಾದ 2015ರಿಂದ ಬಾಕಿ ಇರುವ ತುಟ್ಟಿ ಭತ್ಯೆ, 2018ರಿಂದ ಬಾಕಿ ಇರುವ ಕನಿಷ್ಠ ಕೂಲಿಯನ್ನು ನೀಡದೆ ಅನ್ಯಾಯ ಮಾಡುತ್ತಿದೆ. ಹಿಂದುಗಳಿಗೆ ಅನ್ಯ ಧರ್ಮಿಯ ರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡುವವರಿಗೆ ಬೀಡಿ ಕಾರ್ಮಿಕರಿಗೆ ಅನ್ಯಾಯ ಎಸಗುವ ಬೀಡಿ ಮಾಲಕರು ಯಾವ ಧರ್ಮ ದವರು ಎಂಬುದು ಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಬೀಡಿ ಕಾರ್ಮಿಕರ ಸೆನ್ ಹಣವು ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರಕಾರದ ಖಜಾನೆಗೆ ಹೋಗುತ್ತಿದೆ. ಒಂದು ಪೈಸೆ ಹಣ ಕೂಡ ಬೀಡಿ ಕಟ್ಟುವ ಮಹಿಳೆಯರಿಗೆ ಸಿಗುತ್ತಿಲ್ಲ. ಈ ಸೆಸ್ ಹಣವನ್ನು ಕಲ್ಯಾಣ ಮಂಡಳಿಗೆ ಹಾಕಿದರೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರಿಗೆ ನೆರವು, ಮನೆ ಕಟ್ಟಲು ಸಹಾಯಧನ ನೀಡಬಹುದು ಎಂದು ಅವರು ಹೇಳಿದರು.
ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಮಾತನಾಡಿ, ಬೀಡಿ ಕಾರ್ಮಿಕರಿಗೆ, ರಿಕ್ಷಾ ಚಾಲ ಕರು, ಬೀದಿಬದಿ ವ್ಯಾಪಾರಿ, ಗ್ಯಾರೇಜ್ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಆ ಮೂಲಕ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮನೆ ನಿರ್ಮಾಣ, ಮದುವೆಗೆ ಸಹಾಯಧನ ನೀಡುವಂತೆ ನಾವು ಹೋರಾಟ ಮಾಡುತ್ತಿದ್ದರೆ, ಕೇಂದ್ರ ಸರಕಾರವು ಸಂಘಟಿಕ ಕ್ಷೇತ್ರವನ್ನು ಅಸಂಘಟಿತ ಕ್ಷೇತ್ರವನ್ನಾಗಿ ಮಾಡಿ ಈ ದೇಶದಲ್ಲಿ ಯಾರಿಗೂ ಭದ್ರತೆ ಇಲ್ಲದಂತೆ ಮಾಡುತ್ತಿದೆ. ನಮ್ಮನ್ನು ಆಳುವ ಬಿಜೆಪಿ ಕಾಂಗ್ರೆಸ್ ಸರಕಾರ ಬ್ರಿಟೀಷರಿಗಿಂತ ಕ್ರೂರವಾದ ನೀತಿಗಳನ್ನು ಜಾರಿಗೆ ತರುತ್ತಿ ದ್ದಾರೆ. ಬಂಡವಾಳ ಶಾಹಿ ಪರವಾದ ಈ ಸರಕಾರಗಳು ಕಾರ್ಮಿಕರ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಫೆಡರೇಶನ್ ಉಡುಪಿ ಜಿಲ್ಲಾಧ್ಯಕ್ಷ ಮಹಾಬಲ ವಡೇರಹೊಬಳಿ, ಕಾರ್ಯ ದರ್ಶಿ ಉಮೇಶ್ ಕುಂದರ್, ಉಡುಪಿ ಬೀಡಿ ಸಂಘದ ಅಧ್ಯಕ್ಷೆ ನಳಿನಿ ಎಸ್., ಕುಂದಾಪುರ ಬೀಡಿ ಸಂಘದ ಅಧ್ಯಕ್ಷೆ ಬಲ್ಕೀಸ್ ಬಾನು, ಕಾರ್ಕಳ ತಾಲೂಕು ಬೀಡಿ ಕಾರ್ಮಿ ಕರ ಸಂಘದ ಅಧ್ಯಕ್ಷ ಸುನೀತಾ ಶೆಟ್ಟಿ, ಕಾರ್ಯದರ್ಶಿ ಕವಿರಾಜ್ ಎಸ್., ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಖಜಾಂಚಿ ಶಶಿಧರ ಗೊಲ್ಲ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಕಾರ್ಯದರ್ಶಿ ಎಚ್.ನರಸಿಂಹ, ಸಿಐಟಿಯು ಕುಂದಾಪುರ ವಲಯ ಸಂಚಾಲಕ ಚಂದ್ರಶೇಖರ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಪ್ರೇಮ ನೆಲ್ಲಿಕಟ್ಟೆ, ರತ್ನ ಗುಲ್ವಾಡಿ, ಗುಲಾಬಿ, ಪ್ರೇಮ ಬಳ್ಕೂರು, ಪದ್ದು, ರತ್ನ, ವಸಂತಿ, ಇಂದಿರಾ, ಡಿ.ಗಿರಿಜಾ ಮೊದಲಾದವರು ಉಪಸ್ಥಿತರಿದ್ದರು.