ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಗುಜರಿ ವ್ಯವಹಾರ, ಎಲ್ಲಾ ಸ್ತರಗಳಲ್ಲೂ ವ್ಯಾಪಕ ವಂಚನೆ- ಅವ್ಯವಹಾರ: ಪ್ರತಾಪ್‌ಚಂದ್ರ ಶೆಟ್ಟಿ
ಉಡುಪಿ, ಸೆ.11: ಕರಾವಳಿ ಭಾಗದಲ್ಲಿರುವ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದೆರಡು ವರ್ಷಗಳಲ್ಲಿ ನಡೆದಿರುವ ಗುಜರಿ ಮಾರಾಟ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಚಾಚಾರ ನಡೆದಿದೆ. ಇದರ ಎಲ್ಲಾ ಸ್ತರಗಳಲ್ಲೂ ವ್ಯಾಪಕ ವಂಚನೆ ಹಾಗೂ ಅವ್ಯವಹಾರ ನಡೆದಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ಕುಂದಾಪುರದ ಮಾಜಿ ಶಾಸಕ, ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಬ್ರಹ್ಮಾವರ ಹೊಟೇಲ್ ಆಶ್ರಯದ ಅಂಬಾ ಸಭಾಸದನದಲ್ಲಿ ಇಂದು ಆಯೋಜಿಸಿದ್ದ ರೈತರ ಹಾಗೂ ಸಕ್ಕರೆ ಕಾರ್ಖಾನೆಯ ಸದಸ್ಯರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಭ್ರಷ್ಚಾಚಾರದ ವಿರುದ್ಧ ಮುಂದೆ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಅವ್ಯವಹಾರದ ಹಿಂದೆ ದೊಡ್ಡ ಜಾಲವೊಂದಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಯಾವುದೋ ಸಕ್ಕರೆ ಕಾರ್ಖಾನೆಯಲ್ಲಿ ನಡೆದಂತೆ ಗುಜರಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಕಾರ್ಖಾನೆಯ ಆಡಳಿತ ಮಂಡಳಿಯ ಮನವಿಗೆ ಸರಕಾರ ಅಸ್ತು ಅನ್ನುವ ಮೂಲಕ ವಂಚನೆಯ ಹಗರಣ ಪ್ರಾರಂಭಗೊಂಡಿತ್ತು ಎಂದವರು ಹೇಳಿದರು.
ಸಕ್ಕರೆ ಕಾರ್ಖಾನೆ ಹಗರಣದ ಬಗ್ಗೆ ರೈತ ಸಂಘ ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿದೆ. ಇದು ನಮ್ಮ ಜವಾಬ್ದಾರಿ ಸಹ ಆಗಿದೆ. ರೈತರಿಗೆ ಸೇರಿದ ಆಸ್ತಿ ಹಾಗೂ ಸೊತ್ತುಗಳನ್ನು ಉಳಿಸಿಕೊಳ್ಳುವುದು ರೈತ ಸಂಘದ ಜವಾಬ್ದಾರಿಯಾಗಿದೆ. ಹೀಗಾಗಿ ನಾವು ನ್ಯಾಯಯುತ ಹೋರಾಟಕ್ಕೆ ಇಳಿದಿದ್ದೇವೆ. ರೈತರ ಮೂಲಭೂತ ಅವಶ್ಯಕತೆಯ ಬಗ್ಗೆ ಮಾತನಾಡುವ ಹಕ್ಕು ರೈತಸಂಘಕ್ಕಿದೆ. ಅದು ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅವರು ಸಂಘದ ನಡೆಯನ್ನು ಟೀಕಿಸುತ್ತಿರುವವರಿಗೆ ಉತ್ತರಿಸಿದರು.
50 ಮಂದಿಯ ಎಜಿಎಂ: 5000ಕ್ಕೂ ಅಧಿಕ ಸದಸ್ಯರಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ವರ್ಷ ನಡೆದ 2021-22ನೇ ಸಾಲಿನ ಎಜಿಎಂ ನಲ್ಲಿ ಭಾಗವಹಿಸಲು ನೋಟೀಸು ಪಡೆದವರು 50 ಮಂದಿ. ಇವರಲ್ಲಿ ಮಹಾಸಭೆಯಲ್ಲಿ ಭಾಗವಹಿಸಿದವರು ಕೇವಲ 14 ಮಂದಿ. ಇವರು ಸೇರಿ 10 ಮಂದಿಯ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ್ದರು. ಉಳಿದವರಿಗೆ ಮಾಹಿತಿಯೇ ಸಿಗದಂತೆ ನೋಡಿಕೊಂಡಿದ್ದರು. ಹೀಗಾಗಿ ನಾವು ಈ ಬಾರಿಯ ಎಜಿಎಂ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುತಿದ್ದೇವೆ ಎಂದರು.
ಹೀಗೆ 41 ಮಂದಿಯಿಂದ ಆಯ್ಕೆಯಾದ 10 ಮಂದಿಯ ಆಡಳಿತ ಮಂಡಳಿ ಕಾರ್ಖಾನೆಯನ್ನು ಮುಳುಗಿಸಬೇಕೆಂಬ ಉದ್ದೇಶದೊಂದಿಗೆ ಬಂದಿರುವುದು ಸ್ಪಷ್ಟ. ಗುಜರಿಯನ್ನು ಮಾತ್ರವನ್ನು ಕಟ್ಟಡದ ಪಂಚಾಂಗದ ಕಲ್ಲನ್ನು ಸಹ ಮಾರಿದೆ ಎಂದು ಆರೋಪಿಸಿದ ಅವರು ಇಡೀ ಹಗರಣದ ವಿರುದ್ಧ ನಾವು ಮೊಕದ್ದಮೆ ದಾಖಲಿಸಿರುವುದು ಆಡಳಿತ ಮಂಡಳಿ ಮೇಲೆ ಎಂದರು.
ನಮಗೆ ಸೇರಿದ ಸೊತ್ತು ನಮ್ಮ ಕಣ್ಣೇದುರೇ ಲೂಟಿಯಾಗುವಾಗ ರೈತ ಸಂಘ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಕ್ಕರೆ ಕಾರ್ಖಾನೆಯ ರೈತರಿಗೆ ಸೇರಿದ 110 ಎಕರೆ ಬಹುಮೂಲ್ಯ ಜಮೀನನ್ನು ಈ ಮಂಡಳಿ ಪರಭಾರೆ ಮಾಡದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು.
ನಮಗೆ ಗುರಿ ಮುಟ್ಟುವುದು ಮುಖ್ಯ. ಅದಕ್ಕೆ ಗಡಿಬಿಡಿ ಮಾಡುತ್ತಿಲ್ಲ. ನಾವು ಕಾನೂನು ಹೋರಾಟವನ್ನೂ ಮಾಡುತಿದ್ದೇವೆ. ಸರಕಾರಕ್ಕೆ, ಜಿಲ್ಲಾಡಳಿತಕ್ಕೆ, ಇಲಾಖೆಗೆ, ಪೊಲೀಸರಿಗೆ ಈ ಬಗ್ಗೆ ನೀಡಿದ ಅರ್ಜಿ, ಮಾಡಿಕೊಂಡ ಮನವಿ ಯಾವುದೇ ಫಲ ನೀಡಿಲ್ಲ. ಇಷ್ಟೆಲ್ಲಾ ಮಾಡಿದರೂ ಯಾರಿಂದಲೂ ಕನಿಷ್ಠ ತನಿಖೆಯ ಆದೇಶವಾಗಿಲ್ಲ ಎಂಬುದು ಇಂದಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು. ಇದರಿಂದಾಗಿಯೇ ಈ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲೂ ಆಡಳಿತ ಮಂಡಳಿ ಸ್ವೇಚ್ಛಾಚಾರದ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಮಾತನಾಡಿ, ರೈತ ಸಂಘದೊಂದಿಗೆ ನಮೆ ಸೈದ್ಧಾಂತಿಕ ಭಿನ್ನಮತ ಇದ್ದರೂ ರೈತರ ಹಿತಾಸಕ್ತಿ ಕಾಪಾಡುವ ವಿಷಯ ಬಂದಾಗ ನಾವು ಜೊತೆಗಿರುತ್ತೇವೆ. ಈ ಬಗ್ಗೆ ನಾವು ಎಂಟು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಇನ್ನೂ ಅಲ್ಲಿಂದ ಸ್ಪಂಧನೆ ಸಿಕ್ಕಿಲ್ಲ. ನ್ಯಾಯಕ್ಕಾಗಿ ಹೋರಾಟದಲ್ಲಿ ಭಾಕಿಸಂ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸಲಿದೆ ಎಂದರು.
ಕಾರ್ಖಾನೆಯ ಮಾಜಿ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ ಹಾಗೂ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಿತ್ಯಾನಂದ ಶೆಟ್ಟಿ ಬ್ರಹ್ಮಾವರ ಸ್ವಾಗತಿಸಿದರೆ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಶೆಣೈ ಪ್ರಾಸ್ತಾವಿಕ ಮಾತುಗಳಲ್ಲಿ ಗುಜರಿ ಮಾರಾಟ ಹಗರಣದ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು.
ಭಾರೀ ಸಂಖ್ಯೆಯ ರೈತರು ಸೇರಿದ ಇಂದಿನ ಸಭೆಯಲ್ಲಿ ಕಾರ್ಖಾನೆಯ ಮಾಜಿ ಅಧ್ಯಕ್ಷ ಜಯಶೀಲ ಶೆಟ್ಟಿ, ಖಜಾಂಚಿ ಬೋಜ ಕುಲಾಲ್, ವಕ್ತಾರ ವಿಕಾಸ ಹೆಗ್ಡೆ, ಬಿ.ಭುಜಂಗ ಶೆಟ್ಟಿ, ಪ್ರದೀಪ್ ಬಲ್ಲಾಳ್, ಕಿಶನ್ ಹೆಗ್ಡೆ, ಎಂ.ಸುಧಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.